ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಸ್. ರಾಮಪ್ಪ
ಹರಿಹರ,ಆ.15- ಸ್ವಾತಂತ್ರ್ಯ ಸಮಯದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಎಷ್ಟು ಸ್ಮರಣೆ ಮಾಡಿದರೂ ಸಾಲದು. ಅವರ ಬಲಿದಾನದಿಂದಾಗಿ ಇಂದು ದೇಶದ ಜನರು ನೆಮ್ಮದಿಯ ಜೀವನ ನಡೆಸಲು ದಾರಿಯಾಗಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ನಗರದ ಗಾಂಧಿ ಮೈದಾನದಲ್ಲಿ ತಾಲ್ಲೂಕು ಆಡಳಿತದಿಂದ ಇಂದು ನಡೆದ 74 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಜನರು ನೆಮ್ಮದಿ ಜೀವನ ನಡೆಸಲು ಸರ್ದಾರ್ ವಲ್ಲಭಭಾಯಿ ಪಟೇಲ್, ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರಬೋಸ್, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ನೆಹರು, ಭಗತ್ ಸಿಂಗ್ ಸೇರಿದಂತೆ ಅನೇಕ ಮಹನೀಯರು ತಮ್ಮ ಪ್ರಾಣದ ಹಂಗು ತೊರೆದು ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟ ನಡೆಸಿದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿತು. ದೇಶದ ಒಳಿತಿಗಾಗಿ ಶ್ರಮಿಸಿರುವ ವ್ಯಕ್ತಿಗಳನ್ನು ನಾವುಗಳು ಜಾತಿ ಭೇದ ಮರೆತು ಸ್ಮರಿಸುವ ಕಾರ್ಯವನ್ನು ಮಾಡಬೇಕು ಎಂದರು.
ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ನೆನಪಿನಲ್ಲಿ ಮಾಡುವ ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ದೇಶದ ಒಳಿತಿಗಾಗಿ ಮಹನೀಯರು ಮಾಡಿದ ಬಲಿದಾನದ ಫಲವಾಗಿ ದೇಶದ ವೇಗದ ದಿಕ್ಕು ಬದಲಾವಣೆ ಆಗಿದೆ. ರಕ್ಷಣೆ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ನೌಕೆ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಪ್ರಗತಿ ಹೊಂದುತ್ತಿರುವ ರಾಷ್ಟ್ರವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ಶ್ರೀದೇವಿ ಮಂಜುನಾಥ್, ಉಪಾಧ್ಯಕ್ಷೆ ಜಯಮ್ಮ ಬಸವಲಿಂಗಪ್ಪ ಗೌಡ್ರು. ನಗರಸಭೆ ಸದಸ್ಯರಾದ ಜಂಬಣ್ಣ ಗುತ್ತೂರು, ನಾಗರತ್ನ, ಮೆಹಬೂಬ್ ಬಾಷಾ, ಕೆ.ಜಿ. ಸಿದ್ದೇಶ್. ಎಪಿಎಂಸಿ ಅಧ್ಯಕ್ಷ ಬಿ. ಹನುಮಂತರೆಡ್ಡಿ, ವಿವಿಧ ಇಲಾಖೆ ಅಧಿಕಾರಿಗಳಾದ ಪೌರಾಯುಕ್ತೆ ಎಸ್. ಲಕ್ಷ್ಮೀ, ಎಇಓ ಯು. ಬಸವರಾಜಪ್ಪ, ಇಓ ಲಕ್ಷ್ಮೀಪತಿ, ಸಿಪಿಐ ಎಸ್. ಶಿವಪ್ರಸಾದ್ ಮಠದ್, ಪಿಎಸ್ಐ ಎಸ್ ಶೈಲಾಶ್ರೀ, ಸಮಾಜ ಕಲ್ಯಾಣ ಇಲಾಖೆ ಪರಮೇಶ್ವರಪ್ಪ, ಕೃಷಿ ಇಲಾಖೆ ಗೋವರ್ಧನ್, ಆರೋಗ್ಯ ಇಲಾಖೆ ಡಾ. ಚಂದ್ರಮೋಹನ್, ತೋಟಗಾರಿಕೆ ಇಲಾಖೆ ರೇಖಾ, ಲೋಕೋ ಪಯೋಗಿ ಡೊಂಕ್ಕಪ್ಪ, ಮುಖಂಡರಾದ ಮಂಜುನಾಥ್ ಅಂಗಡಿ, ದಾದಾಪೀರ್, ಜಾಕೀರ್, ಇತರರು ಹಾಜರಿದ್ದರು.