ಹರಿಹರ, ಆ.14- ನಗರದ ಹಳೇ ಪಿ.ಬಿ. ರಸ್ತೆಯಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಳವಡಿಸಿರುವ ಅಲಂಕಾರಿಕ ವಿದ್ಯುತ್ ದೀಪಗಳನ್ನು ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಶಾಸಕ ಎಸ್.ರಾಮಪ್ಪ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಂಸದ ಸಿದ್ದೇಶ್ವರ, ದೂಡಾದಿಂದ ಒಂದು ಕೋಟಿ ರೂ. ಬಿಡುಗಡೆ ಮಾಡಿ, ಸುಮಾರು 51 ವಿದ್ಯುತ್ ಕಂಬಗಳನ್ನು ಹಾಕಿ ಈ ಕಾರ್ಯವನ್ನು ಮಾಡಲಾಯಿತು. ಆದರೆ, ಇದರಲ್ಲಿ ಯಾವುದೇ ರಾಜಕೀಯ ಪಕ್ಷಗಳು ಎಂಬುದು ಇಲ್ಲ. ಹರಿಹರ ನಗರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೈ ಜೋಡಿಸಲಾಗಿದೆ. ಇದರ ಜೊತೆಯಲ್ಲಿ ವಿದ್ಯಾನಗರದ ಪಾರ್ಕ್ ಅಭಿವೃದ್ಧಿಗೆ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ರಸ್ತೆಯಲ್ಲಿ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ದೀಪಗಳನ್ನೂ ಸಹ ಹಾಕಲಾಗುತ್ತದೆ ಎಂದು ತಿಳಿಸಿದರು.
ಶಾಸಕ ಎಸ್.ರಾಮಪ್ಪ ಮಾತನಾಡಿ, ತಾನು ಶಾಸಕನಾದ ಮೇಲೆ ದೂಡಾ ಸಭೆಗೆ ಹೋದಾಗ, ಹರಿಹರದಿಂದ ದೂಡಾಕ್ಕೆ ಲಕ್ಷಾಂತರ ರೂ. ವಿವಿಧ ರೂಪಗಳಲ್ಲಿ ಹಣ ಕಟ್ಟಿಸಿಕೊಳ್ಳಲಾಗುತ್ತದೆ. ಆದರೆ, ಹರಿಹರದ ಅಭಿವೃದ್ಧಿಗೆ ಇದುವರೆಗೂ ಒಂದು ರೂಪಾಯಿ ಹಣವನ್ನೂ ಬಿಡುಗಡೆ ಮಾಡಿಲ್ಲ. ಆದ್ದರಿಂದ ಹರಿಹರಕ್ಕೆ ಹಣ ಬಿಡುಗಡೆ ಮಾಡಿ ಎಂದು ಕೇಳಿಕೊಳ್ಳಲಾಯಿತು. ಆಗ ದೂಡಾದಿಂದ ಹರಿಹರಕ್ಕೆ ಅಲಂಕಾರಿಕ ವಿದ್ಯುತ್ ದೀಪಗಳಿಗೆ ಹಣವನ್ನು ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದರು.
ನನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಆಗಮಿಸಿದ ಸಂದರ್ಭದಲ್ಲೂ ಅವರ ಗಮನಕ್ಕೆ ತರಲಾಯಿತು. ಅವರೂ ಕೂಡ ರಾಮಪ್ಪನವರು ವಿದ್ಯುತ್ ದೀಪಗಳಿಗೆ ಹಣ ಬಿಡುಗಡೆ ಮಾಡಿಸಿ ಎಂದು ಕೇಳುತ್ತಿದ್ದಾರೆ. ಈ ಬಾರಿ ದೂಡಾದಿಂದ ಒಂದು ಕೋಟಿ ರೂ. ಹರಿಹರಕ್ಕೆ ಬಿಡುಗಡೆ ಮಾಡಿಸುವುದಾಗಿ ಹೇಳಿದ್ದರು. ಅದರಂತೆ ಬಿಡುಗಡೆ ಮಾಡಿಸಿದ್ದಾರೆ ಎಂದು ರಾಮಪ್ಪ ವಿವರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸದಸ್ಯರಾದ ರಾಜು ರೋಖಡೆ, ದೇವಿರಮ್ಮ, ಸೌಭಾಗ್ಯ ಮುಕುಂದ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ, ಪ್ರಾಧಿಕಾರದ ಆಯುಕ್ತ ಕುಮಾರಸ್ವಾಮಿ, ದೂಡಾ ಎಇಇ ಸುಜಯ್ ಕುಮಾರ್, ಕೆ.ಎ.ಶ್ರೀಕರ್, ನಗರಸಭೆ ಪೌರಾಯುಕ್ತರಾದ ಎಸ್.ಲಕ್ಷ್ಮಿ, ಎಇಇ ಬಿರಾದಾರ್, ನಗರಸಭೆ ಸದಸ್ಯರಾದ ಅಶ್ವಿನಿ ಕೆ.ಜಿ. ಕೃಷ್ಣ, ಕೆ.ಜಿ.ಸಿದ್ದೇಶ್, ಎಸ್.ಎಂ.ವಸಂತ್, ಶಂಕರ್ ಖಟಾವ್ಕಾರ್, ವಿಜಯಕುಮಾರ್, ಹನುಮಂತಪ್ಪ, ಪಿ.ಎನ್. ವಿರೂಪಾಕ್ಷ, ಉಷಾ ಮಂಜುನಾಥ್, ನೀತಾ, ನಾಗರತ್ನ, ಮೆಹಬೂಬ್ ಬಾಷಾ, ಮುಖಂಡರಾದ ಜಾಕೀರ್, ದಾದಾಪೀರ್, ಎಲ್.ಬಿ.ಹನುಮಂತಪ್ಪ, ಟಿ.ಜೆ. ಮುರುಗೇಶಪ್ಪ, ಅರುಣ್ ಬೊಂಗಾಳೆ, ರಾಘವೇಂದ್ರ ಬೊಂಗಾಳೆ, ಅಜಿತ್ ಸಾವಂತ್ ಮತ್ತು ಇತರರು ಹಾಜರಿದ್ದರು.