ಟ್ಯಾಕ್ಸಿ ಚಾಲಕರ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ

ದಾವಣಗೆರೆ, ಆ. 8- ರಾಜ್ಯದಲಿರುವ ಟ್ಯಾಕ್ಸಿ ಚಾಲಕರಿಗೆ ಕಲ್ಯಾಣ ಮಂಡಳಿಯನ್ನು ರಚಿಸುವಂತೆ ಒತ್ತಾಯಿಸಿ ನಗರದಲ್ಲಿ ಶುಕ್ರವಾರ ದಾವಣಗರೆ ಜಿಲ್ಲಾ ಟ್ಯಾಕ್ಸಿ ಚಾಲಕರ ಕ್ಷೇಮಾಭಿವೃದ್ಧಿ ಸಂಘವು ಪ್ರತಿಭಟನೆ ನಡೆಸಿತು.

ನಗರದ ಯುಬಿಡಿಟಿ ಕಾಲೇಜು ಸಮೀಪದ ಟ್ಯಾಕ್ಸಿ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ಟ್ಯಾಕ್ಸಿ ಚಾಲಕರು ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ಕಲ್ಯಾಣ ಮಂಡಳಿಯನ್ನು ರಚಿಸುವಂತೆ ಸರ್ಕಾರವನ್ನು ಆಗ್ರಹಿಸಿದರು. 

ಇದಕ್ಕೂ ಮುನ್ನ ಮಾತನಾಡಿದ ಸಂಘದ ಗೌರವಾಧ್ಯಕ್ಷ ಆವರಗೆರೆ ಹೆಚ್.ಜಿ.ಉಮೇಶ್, ಕರ್ನಾಟಕ ರಾಜಾದ್ಯಂತ ಸುಮಾರು 6ರಿಂದ 8 ಲಕ್ಷದಷ್ಟು ಕ್ಯಾಬ್, ಟ್ಯಾಕ್ಸಿ, ಆಟೋ, ಬಸ್, ಲಾರಿ ಡ್ರೈವರ್‍ಗಳು ಸುರಕ್ಷಿತವಾದ ನೆಲೆ ಇಲ್ಲದೇ ಅತಂತ್ರದಿಂದ ಜೀವಿಸುತ್ತಿದ್ದಾರೆ. ಕಾರಣ ಇವರ ಜೀವನಕ್ಕಾಗಿ ಕಲ್ಯಾಣ ಮಂಡಳಿ ರಚಿಸುವ ಮೂಲಕ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು. 

ಚಾಲಕರ ಕುಟುಂಬ ಒಳಗೊಂಡಂತೆ ಇಎಸ್‍ಐ, ಪಿಎಫ್, ಗ್ಯಾಚ್ಯುಟಿಯನ್ನು ಜಾರಿ ಮಾಡಬೇಕು. ಚಾಲಕರ ಇಬ್ಬರು ಮಕ್ಕಳಿಗೆ ಪ್ರಾಥಮಿಕ ಪೂರ್ವ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಉಚಿತ ಶಿಕ್ಷಣ ವ್ಯವಸ್ಥೆ ಜಾರಿ ಮಾಡಬೇಕು. 60 ವರ್ಷ ಪೂರೈಸಿದ ಚಾಲಕರಿಗೆ ಪ್ರತಿ ತಿಂಗಳು 5 ಸಾವಿರ ನಿವೃತ್ತಿ ವೇತನವನ್ನು ಅವರ ಕುಟುಂಬಕ್ಕೂ ಅನ್ವಯ ಆಗುವಂತೆ ನೀಡಬೇಕು. ಚಾಲಕರು ಅಪಘಾತದಲ್ಲಿ ಮೃತಪಟ್ಟರೆ ಅವಲಂಬಿತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ದಾವಣಗೆರೆ ನಗರವನ್ನು ಸ್ಮಾಟ್‍ಸಿಟಿ ಘೋಷಣೆ ಮಾಡಿರುವುದರಿಂದ, ಜನಸಂಖ್ಯೆ ಆಧಾರದ ಮೇಲೆ ಏರಿಕೆಯಾಗುತ್ತಿರುವ ವಾಹನಗಳಿಗೆ ಅನುಗುಣವಾಗಿ ಹದಡಿ ರಸ್ತೆಯಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಸಮೀಪದ ದೇವಸ್ಥಾನದ ಬಲಭಾಗದಲ್ಲಿ ಖಾಲಿ ಇರುವ ಜಾಗದಲ್ಲಿ ಖಾಯಂ ಆಗಿ ಟ್ಯಾಕ್ಸಿ ಚಾಲಕರ ನಿಲ್ದಾಣ ನಿರ್ಮಿಸಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟ್ಯಾಕ್ಸಿ ಚಾಲಕರ ಕುಂದು – ಕೊರತೆಗಳ ನಿವಾರಣೆಗೆ ಸಂಬಂಧಿಸಿದಂತೆ ಸಾರಿಗೆ, ಪಾಲಿಕೆ ಆಯಕ್ತರನ್ನು ಒಳಗೊಂಡಂತೆ ಸಭೆ ಕರೆಯಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಹೆಚ್.ಪರಮೇಶ್, ಉಪಾಧ್ಯಕ್ಷ ಬಿ.ಹೆಚ್.ರಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಜಿ.ಸುಭಾ, ಪದಾಧಿಕಾರಿಗಳಾದ ಟಿ.ಮಂಜುನಾಥ್, ಟಿ.ಪ್ರಭು, ವಿ.ವೈ.ಸಂದೀಪ್, ಕೆ.ಎಂ.ರಮೇಶ್, ಎಂ.ಭೀಮಪ್ಪ, ಬಿ.ವಿ.ಸುಧೀಂದ್ರಕುಮಾರ್ ಸೇರಿದಂತೆ ಟ್ಯಾಕ್ಸಿ ಚಾಲಕರು ಪಾಲ್ಗೊಂಡಿದ್ದರು. 

error: Content is protected !!