ಜಗಳೂರು, ಆ.8- ಅಖಿಲ ಭಾರತ ಮುಷ್ಕರಕ್ಕೆ ಬೆಂಬಲಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ (ಎಐಟಿಯುಸಿ)ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಕಾರ್ಯದರ್ಶಿ ಮಹಮ್ಮದ್ ಭಾಷಾ ಮಾತನಾಡಿ, ದೇಶವ್ಯಾಪಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ ಸಿಗುತ್ತಿಲ್ಲ. ಕೋವಿಡ್-19 ಸಮಯದಲ್ಲಿ ವಾರಿಯರ್ಸ್ಗಳಾಗಿ ಮುಂಚೂಣಿಯಲ್ಲಿದ್ದು ಜಾಗೃತಿ ಮೂಡಿಸುತ್ತಿದ್ದರೂ ಇವರಿಗೆ ಸುರಕ್ಷತೆಯಿಲ್ಲ. ಸುರಕ್ಷತಾ ಸಾಧನಗಳ ಕೊರತೆಯಿಂದ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಿರುವುದು ಅಘಾತಕಾರಿ ಸಂಗತಿಯಾಗಿದೆ ಎಂದರು.
ಗೌರವಾಧ್ಯಕ್ಷರಾದ ಸುಶೀಲಮ್ಮ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 21,000 ರೂ. ಸಂಬಳ ಹಾಗೂ ಮಾಸಿಕ ಪಿಂಚಣಿ 10,000 ರೂ. ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಅಧ್ಯಕ್ಷೆ ಹಾಲಮ್ಮ, ಉಪಾಧ್ಯಕ್ಷೆ ಶಾಂತವೀರಮ್ಮ, ಪದಾಧಿಕಾರಿಗಳಾದ ಹಸೀನಾ, ವಿಶಾಲಾಕ್ಷಿ, ಪುಷ್ಪಾಂಜಲಿ, ನಾಗರತ್ನ, ಭರಮಕ್ಕ, ಜಯಲಕ್ಷ್ಮಿ, ಸುಗುಣ, ನೇತ್ರಾವತಿ, ಆಯಿಷಾ, ಯಶೋಧಾ, ನೇತ್ರ ಇನ್ನಿತರರು ಪಾಲ್ಗೊಂಡಿದ್ದರು.