ದಾವಣಗೆರೆ, ಆ.8- ಇತ್ತೀಚೆಗೆ ಕೇಂದ್ರ ಸರ್ಕಾರವು ಜಾರಿಗೊಳಿಸಿದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ 2020 ತಿರಸ್ಕರಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಓ) ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ನಿನ್ನೆ ಪ್ರತಿಭಟನೆ ನಡೆಸಲಾಯಿತು.
ರಾಷ್ಟ್ರೀಯ ಶಿಕ್ಷಣ ನೀತಿ 2020 ತಿರಸ್ಕರಿಸಿ ! ಅಖಿಲ ಕರ್ನಾಟಕ ಪ್ರತಿರೋಧ ದಿನ ಆಚರಣೆಗೆ ಸಂಘಟನೆಯ ರಾಜ್ಯ ಸಮಿತಿ ಕರೆ ಮೇರೆಗೆ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ಈ ಹೊಸ ನೀತಿಯು ಶಿಕ್ಷಣ ಕ್ಷೇತ್ರವು ಎದುರಿಸುತ್ತಿರುವ ಸಮಸ್ಯೆಗಳಿಗೆ ನಿರ್ದಿಷ್ಟ ಉಪಾಯ ರೂಪಿಸಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಅತ್ಯಂತ ಪ್ರಗತಿಪರ ವಿದ್ಯಾರ್ಥಿ ಪರವಾದ ಎಂದು ಕೇಂದ್ರ ಸರ್ಕಾರವೂ ಮಾಧ್ಯಮಗಳ ಮೂಲಕ ಪ್ರಚಾರ ನಡೆಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪೂಜಾ ಮಾತನಾಡಿ, ಪ್ರೌಢ ಶಿಕ್ಷಣವನ್ನು ಒಳಗೊಂಡು ಪದವಿ ಮತ್ತು ಉನ್ನತ ಶಿಕ್ಷಣಕ್ಕೆ ಗಣನೀಯ ಪ್ರಮಾಣದಲ್ಲಿ ದಾಖಲಾತಿ ಕುಸಿಯುತ್ತಿದೆ. ಶಿಕ್ಷಣದ ಗುಣಮಟ್ಟ ಕ್ಷೀಣ, ಖಾಸಗೀ ಕರಣದಿಂದ ಏರುತ್ತಿರುವ ಶುಲ್ಕ ಹೀಗೆ ಅನೇಕ ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕೆ ಹೊಸ ಶಿಕ್ಷಣ ನೀತಿ ಉಪಾಯ ಸೂಚಿಸಿಲ್ಲ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸದ ಈ ಶಿಕ್ಷಣ ನೀತಿ ಹೇಗೆ ಜನಪರ, ವಿದ್ಯಾರ್ಥಿ ಪರವಾಗಿರಲು ಸಾಧ್ಯ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಈಗಾಗಲೇ ಎಲ್ಲೆಡೆ ವಿಜೃಂಭಿಸುತ್ತಿರುವ ಖಾಸಗೀಕರಣವನ್ನು ಇನ್ನಷ್ಟು ಬೆಳೆಸುವ ನೀಲಿ ನಕ್ಷೆಯಾಗಿದೆಯಷ್ಟೆ. ದೇಶದ ಜನಸಂಖ್ಯೆಯ ಬಹುದೊಡ್ಡ ಭಾಗವಾಗಿರುವ ಬಡವರಿಂದ ಶಿಕ್ಷಣವನ್ನು ಬಹುದೂರ ಕೊಂಡೊಯ್ಯುವ ಈ ನೀತಿ ಖಂಡನೀಯ. ಇದು ಈ ಹಿಂದೆ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಎನ್ಪಿಇ 1986ರ ಮುಂದುವರೆದ ಭಾಗವಾಗಿದೆ ಎಂದು ದೂರಿದರು.
ಈಗ ಚಾಲ್ತಿಯಲ್ಲಿರುವ ಪ್ರಾಥಮಿಕ ಪ್ರೌಢ ಪದವಿ ಪೂರ್ವ ಮತ್ತು ಪದವಿ ಶಿಕ್ಷಣದಲ್ಲಿರುವ ಸಮಸ್ಯೆಗಳನ್ನು ಹೇಳದೆ 5+3+3+4 ಮಾದರಿಯಲ್ಲಿ ವಿಂಗಡಿಸುವುದಾಗಿ ಹೇಳುತ್ತಿದೆ. ಐದನೇ ತರಗತಿಯವರೆಗೂ ಚಟುವಟಿಕೆ ಆಧಾರಿತ ಶಿಕ್ಷಣ ಎಂಬ ಹೆಸರಿನಲ್ಲಿ ಕ್ರಮಬದ್ಧ ಕಲಿಕೆಯನ್ನು ನಾಶಗೊಳಿಸಿ ಈ ಮೂಲಕ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಕುಂಠಿತಗೊಳಿಸಿ ಖಾಸಗಿ ಶಾಲೆಗಳತ್ತ ಪಾಲಕರು ಮುಖ ಮಾಡಲು ಸರ್ಕಾರವೇ ನೀಡಿರುವ ಕರೆ ನೀಡಿದೆ ಎಂದು ಅಪಾದಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷೆ ಸೌಮ್ಯ, ಜಂಟಿ ಕಾರ್ಯದರ್ಶಿಗಳಾದ ಕಾವ್ಯ, ಪುಷ್ಪಾ, ಸ್ವಪ್ನ, ಸುಮನ್ ಸೇರಿದಂತೆ ಇತರರು ಭಾಗವಹಿಸಿದ್ದರು.