ರಾಜಕಾಲುವೆ ಒತ್ತುವರಿ ಆರೋಪ : ನಗರಸಭೆ ಸದಸ್ಯರ ಪ್ರತಿಭಟನೆ

ಹರಿಹರ, ಆ.8- ನಗರದ ಎಸ್.ಜೆ.ವಿ.ಪಿ ಕಾಲೇಜು ಹಿಂಬದಿಯಲ್ಲಿರುವ ಸರ್ಕಾರದ ರಾಜಕಾಲುವೆಯನ್ನು ಎಸ್.ಜೆ.ವಿ.ಪಿ. ಕಾಲೇಜು ಆಡಳಿತ ಮಂಡಳಿಯವರು ಅಕ್ರಮವಾಗಿ ಒತ್ತುವರಿ ಮಾಡುವ ಮೂಲಕ ಕಾಮಗಾರಿ ಮಾಡಲಾಗುತ್ತಿದೆ ಎಂದು  ಆರೋಪಿಸಿ ಸರ್ಕಾರದ ಸರ್ವೇ ಆಗುವವರೆಗೆ ಕಾಮಗಾರಿ ಮಾಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ನಗರಸಭೆ ಸದಸ್ಯರು ಇಂದು ಪ್ರತಿಭಟನೆ ನಡೆಸಿ ಕಾಮಗಾರಿಯನ್ನು ತಡೆದರು.

ಈ ವೇಳೆ ಮಾತನಾಡಿದ ನಗರಸಭೆ ಸದಸ್ಯ ಎಸ್.ಎಂ. ವಸಂತ್, ಆರ್.ಸಿ. ಜಾವೇದ್, ಮೆಹಬೂಬ್ ಬಾಷಾ, ಎಂ‌. ಎಸ್. ಬಾಬುಲಾಲ್, ಮುಖಂಡರಾದ ಜಾಕೀರ್, ದಾದಾಪೀರ್ ಭಾನುವಳ್ಳಿ, ಮಾರುತಿ ಬೇಡರ್ ಮಾತನಾಡಿ,   ಬೆಂಕಿ ನಗರ, ಕಾಳಿದಾಸ ನಗರ, ಹೈಸ್ಕೂಲ್ ಬಡಾವಣೆ ಸೇರಿದಂತೆ ಹಲವಾರು ಬಡಾವಣೆಯ ನೀರು ರಾಜಕಾಲುವೆ ಮೂಲಕ ಹೋಗಿ ನದಿಯನ್ನು ಸೇರುತ್ತದೆ. ಆದರೆ, ಕಾಲೇಜು ಆಡಳಿತ ಮಂಡಳಿಯವರು ತಮಗೆ ಸೇರಬೇಕಾದ ಜಾಗ ವೆಂದು ಜೆಸಿಬಿ ಯಂತ್ರ ಬಳಸಿ ರಾಜಕಾಲುವೆಯನ್ನು ಮಣ್ಣಿ ನಿಂದ ಮುಚ್ಚಿ ಅಕ್ರಮವಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. 

ಎಸ್.ಜೆ.ವಿ.ಪಿ. ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ ಹಾಗೂ ತಿಪ್ಪೇಸ್ವಾಮಿ ನಂದಿಗಾವಿ, ಆರ್.ಟಿ. ಪ್ರಶಾಂತ  ಮಾತನಾಡಿ, ನಮ್ಮ ಕಾಲೇಜು ಶಿಕ್ಷಣ ಸಂಸ್ಥೆಯ ಒಡೆತನದಲ್ಲಿರುವ ಸುಮಾರು 16 ಎಕರೆ ಭೂಮಿಯಲ್ಲಿ ಇರುವ ನಮ್ಮ ಸಂಸ್ಥೆಯ ಕಾಲೇಜು ಕಟ್ಟಡಕ್ಕೆ ಧಕ್ಕೆ ಆಗದಂತೆ ತಡೆಯಲು ಕಾಮಗಾರಿಯನ್ನು ಮಾತ್ರ ಮಾಡಲಾಗಿದೆ. ಸರ್ಕಾರದ ಜಮೀನು ಒತ್ತುವರಿ ಮಾಡುತ್ತಿಲ್ಲ‌. ಕಾಮಗಾರಿ ಮಾಡುವುದಕ್ಕೆ ಪ್ರಾರಂಭಿಸುವು ದಕ್ಕೆ ಮುಂಚಿತವಾಗಿ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದ ನಂತರವೇ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ಬೇಕಾಗಿದ್ದರೆ ಸರ್ವೇ ಇಲಾಖೆಯ ಅಧಿಕಾರಿಗಳು ಸರ್ವೇ ಮಾಡಿ ನಮ್ಮ ಸ್ಥಳವನ್ನು ನಮಗೆ ಬಿಟ್ಟುಕೊಟ್ಟರೆ ನಾವು ಆ ಸ್ಥಳದಲ್ಲಿ ಮಾತ್ರವೇ ಕಾಮಗಾರಿಯನ್ನು ಮಾಡುತ್ತವೆ. ಆದರೆ, ಒಂದು ಅಡಿ ಸಹ ಸರ್ಕಾರದ ಜಮೀನು ನಮಗೆ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಸರ್ವೇ ಇಲಾಖೆಯ ಸಿಬ್ಬಂದಿಯವರು ಬಂದು ಸರ್ವೇ ಮಾಡುವ ತನಕ ಜಂಗಲ್ ಕ್ಲೀನ್ ಮಾತ್ರ ಮಾಡಿ. ಆದರೆ, ಯಾವುದೇ ಕಾಮಗಾರಿಯನ್ನು ಮಾಡುವುದಕ್ಕೆ ಮುಂ ದಾಗಬೇಡಿ. ಸರ್ವೇ ಇಲಾಖೆಯ ವರದಿ ಬಂದ ನಂತರದಲ್ಲಿ ಕಾಮಗಾರಿಯನ್ನು ಪ್ರಾರಂಭಿಸುವಂತೆ ಸೂಚಿಸಿದರು. 

ಪೌರಾಯುಕ್ತರಾದ ಎಸ್. ಲಕ್ಷ್ಮೀ ಮಾತನಾಡಿ, ಇದು ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದರೆ, ರಾಜಕಾಲುವೆಯ ಎರಡು ಭಾಗದಲ್ಲಿ ತಡೆ ಗೋಡೆಯ ನಿರ್ಮಾಣ ಮಾಡುವುದಕ್ಕೆ 8 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಮಾಡಲಾಗಿದೆ. ಹಣ ಬಿಡುಗಡೆ ಆದ ತಕ್ಷಣವೇ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು. 

ಎನ್. ಹೆಚ್. ಪಾಟೀಲ್, ವಕೀಲರು ಷಡಕ್ಷರಯ್ಯ, ಬಾಷಾ ಇತರರು ಹಾಜರಿದ್ದರು.

error: Content is protected !!