ಕುರುಬ ಸಮಾಜಕ್ಕೆ ಎಸ್.ಟಿ. ಸ್ಥಾನ ನೀಡುವಂತೆ ಒತ್ತಾಯಿಸಿ ಜ.6ರಂದು ನಗರದಲ್ಲಿ ಸಮಾವೇಶ

ಕುರುಬ ಸಮಾಜಕ್ಕೆ ಎಸ್.ಟಿ. ಸ್ಥಾನ ನೀಡುವಂತೆ ಒತ್ತಾಯಿಸಿ ಜ.6ರಂದು ನಗರದಲ್ಲಿ ಸಮಾವೇಶ - Janathavaniಎಸ್.ಟಿ. ಹೋರಾಟದಲ್ಲಿ ಆರ್‌ಎಸ್‌ಎಸ್ ಪಾತ್ರ ಎಂಬುದು ಸತ್ಯಕ್ಕೆ ದೂರ

ದಾವಣಗೆರೆ, ಡಿ. 26 – ಕುರುಬರ ಎಸ್.ಟಿ. ಮೀಸಲಾತಿ ಹೋರಾಟದ ಹಿಂದೆ ಆರ್.ಎಸ್.ಎಸ್. ಪಾತ್ರವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿರುವ ಎಸ್.ಟಿ. ಹೋರಾಟ ರಾಜ್ಯ ಸಮಿತಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಎಂ. ರೇವಣ್ಣ, ಈ ಬಗ್ಗೆ ಸಿದ್ದರಾಮಯ್ಯ ಜೊತೆ ಮಾತನಾಡಿ ವಿಷಯ ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಎಸ್.ಟಿ. ಮೀಸಲಾತಿ ಹೋರಾಟ ಕುರುಬರಿಂದ, ಕುರುಬರಿಗಾಗಿ, ಕುರುಬರಿಗೋಸ್ಕರ ನಡೆಯುತ್ತಿದೆ. ಇದಕ್ಕೂ ಆರ್.ಎಸ್.ಎಸ್.ಗೂ ಸಂಬಂಧವಿಲ್ಲ ಎಂದು ಹೇಳಿದರು.

ಕಾಗಿನೆಲೆ ಮಠದ ನೇತೃತ್ವದಲ್ಲಿ ಎಸ್.ಟಿ. ಹೋರಾಟ ನಡೆಯುತ್ತಿದೆ. ಇದಕ್ಕೆ ಸಿದ್ದರಾಮಯ್ಯನವರ ಜೊತೆ ಮಾತನಾಡಲಾಗಿತ್ತು. ಅವರು ನಮ್ಮ ಪ್ರಶ್ನಾತೀತ ನಾಯಕರು. ಅವರಿಗೆ ತಪ್ಪು ಮಾಹಿತಿ ದೊರೆತಿದ್ದರೆ ಮಾತನಾಡಿ ಬಗೆಹರಿಸುತ್ತೇವೆ. ಎಂದು ಹೇಳಿದರು.

ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿ. ಅವರು ಅಹಿಂದ ಎಂದು ಗುರುತಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಹೋರಾಟದಲ್ಲಿ ಬೀದಿಗೆ ಬರುವುದಿಲ್ಲ, ಆದರೆ ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರೂ ಕುರುಬರಿಗೆ ಎಸ್.ಟಿ. ಸ್ಥಾನಮಾನ ನೀಡುವುದನ್ನು ವಿರೋಧಿಸಿಲ್ಲ ಎಂದು ತಿಳಿಸಿದರು.

ಕಾಗಿನೆಲೆ ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರು ಬರುವ ಜನವರಿ 15ರಂದು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಿದ್ದಾರೆ. ಇದಕ್ಕೂ ಮುಂಚೆ ವಿಭಾಗ ಮಟ್ಟದಲ್ಲಿ ಸಮಾವೇಶಗಳನ್ನು ನಡೆಸಲಾಗುವುದು. ದಾವಣಗೆರೆ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಗಳ ಒಳಗೊಂಡ ಎಸ್.ಟಿ. ಹೋರಾಟ ಸಮಾವೇಶ ದಾವಣಗೆರೆಯಲ್ಲಿ ಜನವರಿ 6ರಂದು ನಡೆಯಲಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕುರುಬರಲ್ಲಿ ಶೇ.40ರಷ್ಟು ಜನರು ಅಲೆಮಾರಿಗಳಿದ್ದಾರೆ. ಅವರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಎಷ್ಟೋ ಜನರು ಜಾತಿ ನಿಂದನೆಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರಿಗಾಗಿ ಎಸ್.ಟಿ. ಹೋರಾಟ ನಡೆಯುತ್ತಿದೆ ಎಂದ ರೇವಣ್ಣ, ಸ್ವಾತಂತ್ರ್ಯ ಪೂರ್ವದಲ್ಲೇ ಕುರುಬರನ್ನು ಎಸ್.ಟಿ. ಎಂದು ಗುರುತಿಸಲಾಗಿತ್ತು. ನಾವು ಹೊಸದಾಗಿ ಕೇಳುತ್ತಿಲ್ಲ, ನಮ್ಮ ಕೈ ತಪ್ಪಿರುವುದನ್ನೇ ಕೇಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರುಗಳಾದ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯ ಜೆ.ಸಿ. ಲಿಂಗಪ್ಪ, ಪಾಲಿಕೆ ಸದಸ್ಯೆ ಜಯಮ್ಮ, ಬಿ.ಎಂ.ಸತೀಶ್, ಕುಂದೂರು ವಿರೂಪಾಕ್ಷಪ್ಪ, ಬಳ್ಳಾರಿ ವೀರಮ್ಮ, ನೀಲಪ್ಪ, ಗುರುನಾಥ, ಜೀವೇಶ್ವರಿ, ಸೊಕ್ಕೆ ನಾಗರಾಜ್, ಓಬಣ್ಣ,   ಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!