ಮುಂಬಡ್ತಿ – ಬೀಳ್ಕೊಡುಗೆ ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಾಬಪ್ಪ ಪ್ರತಿಪಾದನೆ
ದಾವಣಗೆರೆ, ಡಿ.26- ಬದ್ಧತೆಯಿಂದ ಕೆಲಸ ಮಾಡುವುದು, ಶೀಘ್ರ ನ್ಯಾಯದಾನ ಮಾಡುವುದು, ನ್ಯಾಯಾಧೀಶರು ಮಾಡಬೇಕಾದ ಪ್ರಮುಖ ಕರ್ತವ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಸಾಬಪ್ಪ ತಿಳಿಸಿದರು.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಮುಂಬಡ್ತಿ ಪಡೆದು ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಅವರನ್ನು ಜಿಲ್ಲಾ ಸೇವಾ ಪ್ರಾಧಿಕಾರದಿಂದ ಪ್ಯಾನಲ್ ವಕೀಲರು ನೀಡಿದ ಬೀಳ್ಕೊಡುಗೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ವಕೀಲರು ಮತ್ತು ನ್ಯಾಯಾಧೀಶರು ನ್ಯಾಯ ದಾನ ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಾಗಿದೆ. ನ್ಯಾಯಾಧೀಶರು ಪೂರ್ವಭಾವಿಯಾಗಿ ತಮ್ಮ ಕೇಸುಗಳನ್ನು ಓದಿಕೊಂಡು ಬಂದಾಗ ಮಾತ್ರ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್. ಅರುಣ್‍ಕುಮಾರ್ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಕರ್ತವ್ಯ ನಿರ್ವಹಿಸುವ ನ್ಯಾಯಾಧೀಶರು ಅತೀ ವಿರಳ. ಅಂಥವರಲ್ಲಿ ನ್ಯಾಯಾಧೀಶರಾದ ಸಾಬಪ್ಪ ಅವರು ಕಲ್ಯಾಣ
ಸಮಾಜದ ಆದರ್ಶವನ್ನು ಇಟ್ಟುಕೊಂಡು ದುರ್ಬಲರ, ಬಡವರ ಬಗ್ಗೆ ತುಂಬಾ ಕಾಳಜಿ ಇಟ್ಟುಕೊಂಡು ನ್ಯಾಯಾಧೀಶರಾಗಿ ಮತ್ತು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಸಾಬಪ್ಪ ಅವರ ಸೇವೆ ಮತ್ತು ವ್ಯಕ್ತಿತ್ವವನ್ನು ಮೆಲುಕು ಹಾಕಿದರು.
ಪ್ಯಾನಲ್ ವಕೀಲರುಗಳಾದ ಆಂಜನೇಯ ಗುರೂಜಿ, ಮಂಜುಳ, ಪ್ರದೀಪ್, ಭಾಗ್ಯಮ್ಮ, ರೇಖಾ, ನ್ಯಾಯವಾದಿ ನಜೀರ್ ಅಹ್ಮದ್ ಮುಂತಾದವರು ಮಾತನಾಡಿ, ಸಾಬಪ್ಪನವರ ಕಾರ್ಯವೈಖರಿಯನ್ನು ಪ್ರಶಂಸಿಸಿದರು.