ನಮ್ಗೆ ಇಷ್ಟ ಬಂದ ಹುಡ್ಗಿ ಮದ್ವೆ ಮಾಡ್ಕೊಳ್ತೀವಿ: ಇಬ್ರಾಹಿಂ

ಚುನಾವಣೆ ಮುಖ್ಯವಲ್ಲ, ಸಾಮರಸ್ಯ-ಸೌಹಾರ್ದತೆ ಅವಶ್ಯ.

– ಕೆ. ಅಬ್ದುಲ್ ಜಬ್ಬಾರ್

ಹರಿಹರ, ಡಿ.23 – ಹಿರಿಯರ ಒಪ್ಪಿಗೆ ಮೇರಿಗೆ ಮದ್ವೆ ಮಾಡಿ ಕೊಂಡಿದ್ದಾಯ್ತು, ಈಗ ಪರಿಸ್ಥಿತಿ ಹಾಗಿಲ್ಲ, ನಮ್ಗೆ ಇಷ್ಟ ಬಂದ ಹುಡ್ಗಿಯನ್ನು ಮದ್ವೆ ಮಾಡಿ ಕೊಳ್ತೀನಿ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹರಿಹರದಲ್ಲಿ ಹಾಸ್ಯ ಚಟಾಕಿ ಹಾರಿಸಿದರು.

ಬೀದರ್‍ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದ ಅವರು, ಹರಿಹರದಲ್ಲಿ ಹಜರತ್ ಸೈಯದ್ ನಾಡಬಂದ್ ಷಾವಲಿ ದರ್ಗಾಕ್ಕೆ ಭೇಟಿ ನೀಡಿ ಮುಸ್ಲಿಂ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ಈ ವೇಳೆ ಜನತಾವಾಣಿಯೊಂದಿಗೆ ಮಾತನಾ ಡಿದ ಅವರು, ನಾವು ಬಡವರು ಹಳೇ ಕಾರನ್ನೆ ರಿಪೇರಿ ಮಾಡಿಕೊಂಡು ಪ್ರಯಾಣ ಮಾಡ್ತೀವಿ. ಬ್ರೇಕ್ ಮಾತ್ರ ಕಂಟ್ರೋಲ್ ಆಗಿದ್ದರೆ ಸಾಕು ಎಂದು ಪರೋಕ್ಷವಾಗಿ ಕಾಂಗ್ರೆಸ್ ಬಿಟ್ಟು ಜಾತ್ಯತೀತ ಜನತಾದಳ ಸೇರುವ ಇಂಗಿತ  ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡಲು ಕೋರಿದ್ದೆ. ಆದರೆ ಇದಕ್ಕೆ ಅಂದಿನ ಸರ್ಕಾರ ಸ್ಪಂದಿಸಿಲ್ಲ, ಆ ನೋವು ನನಗೆ ಕಾಡುತ್ತಿದೆ. ಸಮುದಾಯಕ್ಕೆ ಅನ್ಯಾಯ ವಾದಾಗ ಸಹಿಸುವ ಶಕ್ತಿ ನನ್ನಲಿಲ್ಲ ಆ ಕಾರಣ ಕ್ಕಾಗಿ ನಾನು ತೆಗೆದುಕೊಂಡ ನಿರ್ಣಯ ಸೂಕ್ತ ಎಂಬ ಅಭಿಪ್ರಾಯ ನನ್ನದಾಗಿದೆ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವಗೌಡ ಅವರೊಂದಿಗೆ ಭೇಟಿ ಮಾಡಿ ಚರ್ಚಿಸಿದ್ದೇನೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಹ ಚರ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು.

ಹರಿಹರದಲ್ಲಿ ಅಂಜುಮನ್ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಸದಸ್ಯತ್ವ ಶುಲ್ಕ 100 ರಿಂದ 1000 ರೂ ಗೆ ಏರಿಸಿದ್ದಾರೆ. ಕಡಿಮೆ ಮಾಡುವಂತೆ ಮಾಜಿ ಅಧ್ಯಕ್ಷ ಬಿ . ಮಹಮ್ಮದ್ ಫೈರೋಜ್ ಮನವಿಗೆ, ಬೆಂಗಳೂರಿನಲ್ಲಿ ಅಧಿಕಾರಿಯನ್ನು ಸಂಪರ್ಕಿಸಿ ವಿವರಿಸುತ್ತೇನೆ ಎಂದು ಹೇಳಿದರು.

ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸಿರಾಜ್ ಅಹ್ಮದ್, ಅಂಜುಮಾನ್ ಮಾಜಿ ಅಧ್ಯಕ್ಷ ಬಿ. ಮಹಮ್ಮದ್ ಫೈರೋಜ್ , ಖಾಜಿ ಖಬಿರುದ್ದೀನ್, ಎಂ.ಎಸ್. ಬಾಬು ಲಾಲ್, ಟಿಪ್ಪು ಸುಲ್ತಾನ್ ಸಮಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಸೈಯದ್ ಆಸೀಫ್, ನಾಡಬಂದ್ ಷಾ ದರ್ಗಾ ಸಮಿತಿ ಅಧ್ಯಕ್ಷ ಅಹಮ್ಮದ್ ಷಾ ಇತರರು ಉಪಸ್ಥಿತರಿದ್ದರು.

error: Content is protected !!