ಹರಪನಹಳ್ಳಿ, ಡಿ.23- ರಾಜ್ಯದಲ್ಲಿ ಏಕ ರೂಪ ಶಿಕ್ಷಣ ವ್ಯವಸ್ಥೆ ಜಾರಿಗಾಗಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಸಹ ಕಾರ್ಯದರ್ಶಿ ಎಚ್.ಎಸ್. ಚೇತನ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲಾ ಮಕ್ಕಳು ಶಿಕ್ಷಣ ಪಡೆಯಬೇಕು, ವರ್ಗಾವಣೆ ಸಮಸ್ಯೆ, ಎನ್‌ಪಿಎಸ್ ರದ್ಧತಿ ಹೀಗೆ ವಿವಿಧ ಬೇಡಿಕೆಗಳನ್ನು ಕೈಗೆತ್ತಿಕೊಂಡು ನಮ್ಮ ಸಂಘದಿಂದ ಹೋರಾಟ ಕೈಗೊಳ್ಳುತ್ತೇವೆ ಎಂದರು.
ಕೋವಿಡ್ ವೇಳೆ ನಾವುಗಳು ಸಾಮಾಜಿಕ ಬದ್ಧತೆ ಯಿಂದ ಕಾರ್ಯನಿರ್ವಹಿಸಿದ್ದೇವೆ. ಸದ್ಯಕ್ಕೆ ಇರುವ ಶಾಲಾ ಆರಂಭ ಕುರಿತಾದ ಗೊಂದಲಗಳನ್ನು ನಿವಾರಿಸುತ್ತೇವೆ. ವಿದ್ಯಾಗಮ ಕಾರ್ಯಕ್ರಮ ಶಾಲಾ ಕೊಠಡಿಯಲ್ಲಿ ಮಾಡುವಂತೆ ಸರ್ಕಾರಕ್ಕೆ ತಿಳಿಸಲಾಗುವುದು ಹಾಗೂ ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆ ಕುರಿತು ಸಚಿವರ ಗಮನ ಸೆಳೆಯುತ್ತೇವೆ ಎಂದರು. ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಸಂಗಪ್ಪನವರ್ , ಶಿಕ್ಷಕರ ಸಂಘದ ರಾಜ್ಯ ಘಟಕದ ಉಪಾದ್ಯಕ್ಷೆ ಜಿ. ಪದ್ಮಲತಾ ಮಾತನಾಡಿ, ಶಿಕ್ಷಕರ ಹಾಗೂ ಮಹಿಳಾ ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್. ಸಿದ್ದಲಿಂಗನಗೌಡ, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಪದ್ಮರಾಜ್ ಜೈನ್ , ಕಾರ್ಯದರ್ಶಿ ಬಸವರಾಜ ಬಂಡಿ, ಪದಾಧಿಕಾರಿಗಳಾದ ಅರ್ಜುನ್, ಮುನ್ನೀಸ, ಬಂದಮ್ಮ, ರತ್ನಮ್ಮ, ಬಿ.ರಾಜಶೇಖರ, ಮಾದಿಹಳ್ಳಿ ಮಂಜುನಾಥ, ರಾಘವೇಂದ್ರ, ಎಂ. ಪ್ರಭು, ಪಿ. ಗಣೇಶ, ರಾಜಕುಮಾರ, ಚಂದ್ರಮೌಳಿ, ವಿಜಯ ಬಣಕಾರ ಇನ್ನಿತರರಿದ್ದರು.