ದಾವಣಗೆರೆ, ಡಿ.23- ಮೊದಲ ಹಂತದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಡೆದ ಗೊಂದಲದಿಂದಾಗಿ ಸರಿಯಾದ ರೀತಿ ಮತದಾನ ನಡೆಯದ ಹಿನ್ನೆಲೆಯಲ್ಲಿ ಮರು ಮತ ದಾನಕ್ಕೆ ಅವಕಾಶ ಮಾಡಿಕೊಡುವಂತೆ ತಾಲ್ಲೂಕಿನ ಬಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂಟಿಹಾಳ್ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ನಿನ್ನೆ ನಡೆದ ಗ್ರಾಪಂ ಚುನಾವಣೆಯ ಸಂದರ್ಭದಲ್ಲಿ ವಿಠಲಾಪುರ ಗ್ರಾಮದಲ್ಲಿ ಮತಗಟ್ಟೆಯನ್ನು ಅಳವಡಿಸಲಾಗಿದ್ದು, ಒಂಟಿಹಾಳ್ ಗ್ರಾಮಸ್ಥರು ಅಲ್ಲಿಗೆ ತೆರಳಿ ಮತ ಹಾಕುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅಲ್ಲಿಗೆ ಹೋದರೆ ಮತದಾರರ ಮತಪಟ್ಟಿಯನ್ನೇ ಕೊಡದೆ ಗೊಂದಲ ಸೃಷ್ಠಿಯಾಗಿತ್ತು. ಮತಪಟ್ಟಿ ತರುವ ವೇಳೆಗಾಗಲೇ ತಡವಾಗಿದ್ದರಿಂದ ವೃದ್ಧರು, ಮಹಿಳೆಯರು, ವಿಕಲಚೇತನರು ಕಾದು, ಬೇಸರಗೊಂಡು ಮತ ಹಾಕಲು ನಿರಾಕರಿಸಿ ಅಲ್ಲಿಂದ ವಾಪಸ್ಸಾದರು. ಆ ಸಂದರ್ಭದಲ್ಲಿ ಡಿಸಿ, ಎಸ್ಪಿ ಮತದಾರರಿಗೆ ಮನವಿ ಮಾಡಿದರೂ ಸಹ ಅಲ್ಲಿ ಸರಿಯಾದ ಮತದಾನವೇ ನಡೆಯಲಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಒಂಟಿಹಾಳ್ ಗ್ರಾಮದಲ್ಲಿ 242 ಮತದಾರರಿದ್ದು, ಚುನಾವಣಾಧಿಕಾರಿಗಳು ಕೊಟ್ಟಂತಹ ಮತಪಟ್ಟಿಯಲ್ಲಿ ಕೇವಲ 170 ಜನರ ಹೆಸರಿತ್ತು. ಇದರಲ್ಲಿ ಕೇವಲ 130 ಜನರು ಮಾತ್ರ ಮತ ಚಲಾಯಿಸಿದ್ದಾರೆ. ಈ ಹಿಂದಿನಿಂದಲೂ ಪ್ರತ್ಯೇಕ ಮತಗಟ್ಟೆ ಮತ್ತು ವಾರ್ಡ್ ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮತದಾನದ ವೇಳೆ ಸಾಕಷ್ಟು ಗೊಂದಲ ಉಂಟಾಗಲು ಇದೇ ಕಾರಣವಾಗಿದ್ದು, ಕಾರಣ ಮರು ಮತದಾನಕ್ಕೆ ಅವಕಾಶ ನೀಡುವಂತೆ ಗ್ರಾಮಸ್ಥರು ಕೋರಿದ್ದಾರೆ.