ಬರದ ನಾಡಿನ ಜನತೆಗೆ ಸರಕಾರದ ನೀರಾವರಿ ಕೊಡುಗೆ : ಶಾಸಕ ಎಸ್.ವಿ. ರಾಮಚಂದ್ರ
ಜಗಳೂರು, ಡಿ.19 – ಬರದ ನಾಡಿನ ಬಹುದಿನದ ಬೇಡಿಕೆ ಮತ್ತು ನನ್ನ ಕನಸಿನ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಎಂದು ಸರಕಾರ ಘೋಷಿಸಿದ್ದು ನನಗೆ ಸಂತಸ ಉಂಟುಮಾಡಿದೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಭದ್ರಾ ಮೇಲ್ದಂಡೆ ಯೋಜನೆ ಮಾಹಿತಿ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೇಂದ್ರ ಜಲ ಆಯೋಗ ಭದ್ರಾ ಮೇಲ್ದಂಡೆ ಯೋಜನೆಗೆ ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಕರ್ನಾಟಕದ ಮೊಟ್ಟ ಮೊದಲ ರಾಷ್ಟ್ರೀಯ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಇದರಿಂದ ಶೇ.90:10 ಅನುಪಾತದಡಿ ಕೇಂದ್ರ ಸರ್ಕಾರವು ರೂ 16,125 ಕೋಟಿ ನೀಡಲಿದ್ದು ಕೋವಿಡ್ ಕಷ್ಟ ಕಾಲದಲ್ಲಿ ರಾಜ್ಯ ಸರ್ಕಾರಕ್ಕೆ ನೆರವಾಗಲಿದೆ ಎಂದರು.
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕು ಹಾಗೂ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ 21,473 ಕೋಟಿ ರೂ ವೆಚ್ಚದ ಯೋಜನೆಗೆ ಕೇಂದ್ರ ಜಲ ಆಯೋಗದ ತಾಂತ್ರಿಕ ಸಲಹಾ ಸಮಿತಿ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡಿದೆ. ದಶಕಗಳಿಂದಲೂ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ತರಲು ಒತ್ತಾಯ ಮಾಡುತ್ತಿದ್ದ ರಾಜ್ಯದ ಬೇಡಿಕೆಗೆ ಮನ್ನಣೆ ಸಿಕ್ಕಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಹಣ ಜನವರಿ 21 ರಂದು ಬಿಡುಗಡೆಯಾಗಲಿದೆ. ಜಗಳೂರು ಕೆರೆ ಸೇರಿದಂದತೆ ತಾಲ್ಲೂಕಿನ 9 ಕೆರೆಗಳಿಗೆ ನೀರು ತುಂಬಲಿದೆ. 40 ಸಾವಿರ ಎಕರೆ ಹನಿ ನೀರಾವರಿಯಾಗಲಿದೆ. ಅಲ್ಲದೆ ಮೂರು ವರ್ಷಗಳಲ್ಲಿ ಯೋಜನೆ ಪೂರ್ಣವಾಗಲಿದೆ. ಜಗಳೂರಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ವಿಭಾಗೀಯ ಕಛೇರಿ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ ಎಂದರು.
ಈ ಯೋಜನೆ ಜಾರಿಗಾಗಿ ಹೋರಾಟ ನಡೆಸಿದ ಭದ್ರಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ನಿವೃತ್ತ ಇಂಜಿನಿಯರ್ ಟಿ ತಿಪ್ಪೇಸ್ವಾಮಿ ಮತ್ತು ಸಮಿತಿ ಸದಸ್ಯರಾದ ಕೊಟ್ಟೂರುಸ್ವಾಮಿ ಅನ್ವರ್ ಸಾಬ್, ಕೆ.ಬಿ.ಕಲ್ಲೇರುದ್ರೇಶ್. ಪ್ರಕಾಶ ರೆಡ್ಡಿ, ಹಾಗೂ ಸರ್ವ ಸದಸ್ಯರು ಮತ್ತು ಜಾತ್ಯಾತೀತವಾಗಿ ಹೋರಾಟ ನಡೆಸಿದ ಎಲ್ಲಾ ಮುಖಂಡರು ಹಾಗೂ ವಿವಿಧ ಸಂಘಟನೆಗಳಿಗೆ ಅಭಿನಂದಿಸುತ್ತೇನೆ ಎಂದರು.
ಯೋಜನೆಗೆ ರಾಷ್ಟ್ರೀಯ ಯೋಜನೆ ಮಾನ್ಯತೆ ನೀಡಿದ ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರಿಗೆ, ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೆ ಮತ್ತು ಸಿರಿಗೆರೆ ತರಳಬಾಳು ಶ್ರೀಗಳಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದಿಸುವುದಾಗಿ ರಾಮಚಂದ್ರ ತಿಳಿಸಿದರು.
ಬರದ ನಾಡಿನ ಅಭಿವೃದ್ದಿಗಾಗಿ ನೀರಾವರಿ ಕನಸಿನ ಯೋಜನೆಗಳಾದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಸಿರಿಗೆರೆ ಶ್ರೀಗಳ ಪ್ರಯತ್ನದಿಂದ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಒತ್ತಾಸೆಯ ಫಲವಾಗಿ ಮತ್ತು 57 ಕೆರೆ ನೀರು ತುಂಬಿಸುವ ಯೋಜನೆಯಡಿ ತ್ವರಿತಗತಿಯಲ್ಲಿ ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದ್ದು ಜುಲೈ ವೇಳೆಗೆ ಕೆರೆ ತುಂಬಲಿವೆ.ತಾಲ್ಲೂಕಿಗೆ 2021 ಹೊಸ ವರ್ಷ ನೀರಾವರಿ ಕನಸು ನನಸು ಮಾಡಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಲಿದೆ ಎಂದು ಶಾಸಕರು ಹೇಳಿದರು.
ತಾಲ್ಲೂಕಿಗೆ ಸಿರಿಗೆರೆ ಶ್ರೀಗಳೇ ಭಗೀರಥರು: ತರಳಬಾಳು ಹುಣ್ಣಿಮೆ ವೇಳೆ ಸಿರಿಗೆರೆ ಶ್ರೀಗಳ ಒತ್ತಾಯದಿಂದ ಸಿದ್ದರಾಮಯ್ಯನವರ ಸರ್ಕಾರ 240 ಕೋಟಿ ಹಣ ಘೋಷಿಸಿದ್ದು ನಂತರ ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀರಿನ ಹಂಚಿಕೆ ಮಾಡಲಾಯಿತು. ಯಡಿಯೂರಪ್ಪ ಸರ್ಕಾರ ಬಂದಾಗ 640 ಕೋಟಿಗೆ ಏರಿಕೆ ಮಾಡಿ ಅನುಮೋದನೆ ನೀಡಿತು ಎಂದರು.
ಈ ಮಧ್ಯೆ 1 ವರ್ಷಕ್ಕೂ ಹೆಚ್ಚು ಕಾಲ ಇದ್ದ ಸಮ್ಮಿಶ್ರ ಸರ್ಕಾರದಲ್ಲಿ ಸುಮ್ಮನೆ ಕುಳಿತಿದ್ದವರು ಆಗ ಏನು ಮಾಡುತ್ತಿದ್ದರು? ನಮ್ಮನ್ನು ಟೀಕೆ ಮಾಡುವವರಿಗೆ ಇದರ ಮಾಹಿತಿಯ ಕೊರತೆಯಿದೆ ಎಂದು ಮಾಜಿ ಶಾಸಕರ ಹೆಸರೇಳದೆ ತರಾಟೆಗೆ ತೆಗೆದು ಕೊಂಡರು.
ಭದ್ರಾ ಹಿನ್ನೀರಿನ ಕುಡಿಯುವ ನೀರಿನ ಪೈಪ್ ಲೈನ್ ಗಡಿ ಗ್ರಾಮದಿಂದ ಹಾದು ಹೋಗುತ್ತಿದ್ದು ತಾಲ್ಲೂಕಿನ ಜನತೆಗೆ ತೀವ್ರ ಅನ್ಯಾಯವಾಗಿದೆ. ಕನಿಷ್ಠ ತಾಲ್ಲೂಕಿನ ಹಿರೇಮಲ್ಲನಹೊಳೆ, ಮುಸ್ಟೂರು ಸೇರಿದಂತೆ 2 ಪಂಚಾಯ್ತಿಗಳಿಗೂ ನೀರು ತರುವ ಪ್ರಯತ್ನದಲ್ಲಿರುವೆ. ಈ ಯೋಜನೆಯು ನಮ್ಮ ಕ್ಷೇತ್ರಕ್ಕೆ ಬಿಟ್ಟುಹೋಗಲು ಮಾಜಿ ಶಾಸಕರೇ ನೇರ ಕಾರಣವಾಗಿದ್ದಾರೆ ಎಂದು ರಾಮಚಂದ್ರ ಟೀಕಿಸಿದರು.
ಫಸಲ್ ಬಿಮಾ ಯೋಜನೆಯಡಿ 10,600 ಕೋಟಿ ಹಣ ರೈತರ ಖಾತೆಗೆ ಜಮಾ ಆಗಿದೆ. ಉಳಿದ ಹಣ ಬರಲಿದೆ ಸೂರು ನೀರು ಸೇರಿದಂತೆ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿ ನನ್ನ ಗುರಿ.ನುಡಿದಂತೆ ನಡೆಯುವ ಜಾಯಮಾನ ನನ್ನದು ಎಂದು ಭರವಸೆ ವ್ಯಕ್ತಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ. ನಾಗಪ್ಪ, ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಜಿ.ಪಂ. ಸದಸ್ಯರಾದ ಎಸ್.ಕೆ. ಮಂಜುನಾಥ್, ಶಾಂತಕುಮಾರಿ, ಮಾಜಿ ಸದಸ್ಯ ಸೊಕ್ಕೆ ನಾಗರಾಜ್ ಪ.ಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಆರ್. ಸದಸ್ಯರಾದ ಪಾಪಲಿಂಗಪ್ಪ, ನವೀನ್ ಕುಮಾರ್, ಬಿ.ಪಿ. ಸುಭಾನ್, ರುದ್ರಮುನಿ, ಮುಖಂಡರಾದ ಸಿದ್ದೇಶ್, ಮಹಮ್ಮದ್ ಅನ್ವರ್‍ಸಾಬ್, ಬಿ.ರವಿಕುಮಾರ್, ಗೌರಿಪುರ ಶಿವಣ್ಣ, ಸೇರಿದಂತೆ ಇತರರು ಉಪಸ್ಥಿತರಿದ್ದರು.