ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು

ಶೀಘ್ರ ಸಿಎಂ ಬಳಿಗೆ ನಿಯೋಗ : ಬಸವ ಮಾಚಿದೇವ ಶ್ರೀ

ಹರಪನಹಳ್ಳಿ, ಡಿ.19- ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿಗೆ ಸಮುದಾಯದ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಚಿತ್ರದುರ್ಗದ ಜಗದ್ಗುರು ಮಡಿವಾಳ ಮಾಚಿದೇವ ಮಹಾಸಂಸ್ಥಾನ ಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಹಲುವಾಗಲು ಗ್ರಾಮದಲ್ಲಿ ಮಡಿವಾಳ ಸಮುದಾಯದ ವಿವಾಹ ಸಮಾರಂಭಕ್ಕೆ ಆಗಮಿಸಿದ್ದು ಅಲಗಿಲವಾಡ, ಗುಂಡಗತ್ತಿ, ಮಜ್ಜಿಗೇರಿ ಗ್ರಾಮಗಳಿಗೆ ತೆರಳಿ ಸಮುದಾಯವನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

 ರಾಜ್ಯದಲ್ಲಿ ಮಡಿವಾಳ ಸಮುದಾಯ 15ಲಕ್ಷಕ್ಕೂ ಅಧಿಕವಿದ್ದು, ಸುಮಾರು 15 ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಆದರೂ ರಾಜಕೀಯ ಪಕ್ಷಗಳು ಕೇವಲ ನಮ್ಮನ್ನು ಮತ ಬ್ಯಾಂಕ್‍ಗಳನ್ನಾಗಿ ಮಾಡಿಕೊಂಡು ಅಧಿಕಾರ ಹಿಡಿಯಲು ಬಳಸಿಕೊಳ್ಳುತ್ತಿವೆಯೇ ಹೊರತು ಸಮುದಾಯದ ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿರುವುದು ವಿಷಾದದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಜನವರಿ ತಿಂಗಳಲ್ಲಿ  ನಡೆಯಲಿರುವ ಜಿಲ್ಲಾ ಮಹಾ ಸಂಸ್ಥಾನದ ವಾರ್ಷಿಕೋತ್ಸವ ಮುಗಿದ ಬಳಿಕ §ಶ್ರೀಗಳ ನಡಿಗೆ ಹಳ್ಳಿಯ ಕಡೆಗೆ¬ ಎನ್ನುವ ಶೀರ್ಷಿಕೆ ಅಡಿಯಲ್ಲಿ ಮಾರ್ಚ್‍ ತಿಂಗಳಿಂದ ಗ್ರಾಮದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ಮೂಲಕ ರಾಜ್ಯದ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ತಳ ಸಮುದಾಯವಾಗಿರುವ ಮಡಿವಾಳ ಸಮುದಾಯವನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಸಮುದಾಯವನ್ನು ಸಂಘಟಿಸಿ, ಪರಿಶಿಷ್ಟ ಜಾತಿಗೆ ಸೇರ್ಪಡೆಯಾಗುವುದರಿಂದ ಸಮುದಾಯಕ್ಕಾಗುವ ಉಪಯೋಗಗಳ ಕುರಿತು ಜನರಲ್ಲಿ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಹಲುವಾಗಲು ಗ್ರಾಮದ ತೌಡೂರು ಭರ್ಮಪ್ಪ, ಕಮ್ಮಾರ ವೀರಭದ್ರಪ್ಪ, ಆನಂದ, ಕಾಡವ್ವರ ದ್ಯಾಮಜ್ಜ, ಮತ್ತೂರು ಪ್ರಕಾಶ್, ಇಸ್ತ್ರಿ ಅಂಜಿನಪ್ಪ, ಎಂ.ಜಾತಪ್ಪ, ಎಂ. ಮಾರುತಿ, ಎಂ. ಜಯರಾಜ್, ಎಂ. ನಾಗರಾಜ್, ಸಾಸ್ವಿಹಳ್ಳಿ ಬಸವರಾಜ್, ಗುಂಡಗತ್ತಿ ಗ್ರಾಮದಲ್ಲಿ ಕೋಟೆಪ್ಪ, ಎಂ. ಪರಸಪ್ಪ, ಅಲಗಿಲವಾಡ ಗ್ರಾಮದಲ್ಲಿ ಎಂ. ಕೋಟೆಪ್ಪ, ಶಿವಪ್ಪ, ಹನುಮಂತಪ್ಪ, ಮಜ್ಜಿಗೆರೆ ಗ್ರಾಮದಲ್ಲಿ ಮಜ್ಜಿಗೆರೆ ಬಸವರಾಜ್, ಮಲ್ಲಿಕಾರ್ಜುನ, ಹಾಲಸಿದ್ದಪ್ಪ ಸೇರಿದಂತೆ ನಾಲ್ಕು ಗ್ರಾಮಗಳಲ್ಲಿನ ಮಡಿವಾಳ ಸಮುದಾಯದ ಯುವಕರು, ಮುಖಂಡರು ಉಪಸ್ಥಿತರಿದ್ದರು.

error: Content is protected !!