ಜಿಲ್ಲಾ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಎಂ.ಪಿ. ವೀಣಾ ಮಹಾಂತೇಶ್
ಹರಪನಹಳ್ಳಿ, ಡಿ.19- ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಕಾಂಗ್ರೆಸ್ ಪಕ್ಷವು ಮೊದಲಿನಿಂದಲೂ ಶಕ್ತಿ ತುಂಬುತ್ತಾ ಬಂದಿದೆ ಎಂದು ಜಿಲ್ಲಾ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಎಂ.ಪಿ. ವೀಣಾ ಮಹಾಂತೇಶ್ ಹೇಳಿದರು.
ಎಂ.ಪಿ. ಪ್ರಕಾಶ್ ಸಮಾಜ ಮುಖಿ ಟ್ರಸ್ಟ್‍ನ ಜನ ಸಂಪರ್ಕ ಕಚೇರಿಯಲ್ಲಿ ಜರುಗಿದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ 35 ಗ್ರಾಮ ಪಂಚಾಯ್ತಿಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಶಾಸಕ ಜಿ. ಕರುಣಾಕರ ರೆಡ್ಡಿ ಶಾಸಕರಾಗಿ ಮೂರು ವರ್ಷ ಕಳೆದರೂ ತಾಲ್ಲೂಕನ್ನು ಅಭಿವೃದ್ಧಿ ಪಡಿಸದೇ ಇರುವುದರಿಂದ ಚುನಾವಣೆಯಲ್ಲಿ ಶಾಸಕರಿಗೆ ಹಿನ್ನಡೆಯಾಗುವುದರಲ್ಲಿ ಯಾವುದೇ ರೀತಿ ಅನುಮಾನವಿಲ್ಲ ಎಂದು ಹೇಳಿದರು.
ದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳು ಬಡವರ, ಕೂಲಿ ಕಾರ್ಮಿಕರ, ದೀನದಲಿತರ ಪರವಾಗಿ ತರಲಾಗಿದ್ದ ಕೆಲ ಯೋಜನೆಗಳನ್ನು ದೇಶದ ಬಿಜೆಪಿ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಅದನ್ನು ತಿರಸ್ಕರಿಸಿ, ಜನವಿರೋಧಿ ಆಡಳಿತ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ಜನ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕೆಪಿಸಿಸಿ ವೈದ್ಯಕೀಯ ಘಟಕದ ಉಪಾಧ್ಯಕ್ಷ ಡಾ. ಮಹಾಂತೇಶ ಚರಂತಿಮಠ್ ಮಾತನಾಡಿ, ಇಂದಿರಾ ಗಾಂಧಿ, ರಾಜೀವಗಾಂಧಿ ಕಾಲದಿಂದ ಡಾ. ಮನಮೋಹನ್ ಸಿಂಗ್ ಅವಧಿವರೆಗೂ ಗ್ರಾಮಗಳ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಶ್ರಮಿಸಿದ್ದು, ತಾಲ್ಲೂಕಿನಲ್ಲಿ ಎಂದಿಗೂ ಬಡವರ ಮತ್ತು ಗ್ರಾಮೀಣ ಜನರ ಪರವಾದ ಪಕ್ಷವಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ಗಾಯತ್ರಮ್ಮ, ಮನೋಜ್, ದಾದಾಪೀರ್ ಇನ್ನಿತರರಿದ್ದರು.