ಹರಿಹರ : ಚುನಾವಣೆ ಪೂರ್ವ ಸಿದ್ಧತೆ ಪರಿಶೀಲನೆ

ಹರಿಹರ, ಡಿ.17- ಇದೇ ದಿನಾಂಕ 27 ರಂದು ನಡೆಯವ ಗ್ರಾಮ ಪಂಚಾಯತಿ ಚುನಾವಣೆಯ ನಿಮಿತ್ತವಾಗಿ ನಗರಕ್ಕೆ ಚುನಾವಣಾ ವೀಕ್ಷಕರಾದ ಆರತಿ ಆನಂದ್ ರವರು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಚುನಾವಣೆಯ ಪೂರ್ವ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿದರು.

ಈ ವೇಳೆ ಮಾತನಾಡಿದ ಅವರು ಹರಿಹರ ತಾಲ್ಲೂಕಿನ 23 ಗ್ರಾಮ ಪಂಚಾಯತಿಗಳ ಚುನಾವಣೆಯಲ್ಲಿ ಯಾವುದೇ ತರಹದ ಲೋಪದೋಷಗಳು ಆಗದಂತೆ ಈಗಾಗಲೇ ಎಲ್ಲಾ ರೀತಿಯ ಸಿದ್ದತೆ ಮಾಡಲಾಗಿದೆ. ಅದರಲ್ಲಿ ಮತದಾರರ ಪಟ್ಟಿಗಳ ವಿತರಣೆ, ಮತದಾನ ಕೇಂದ್ರಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸೂಕ್ತವಾದ ವ್ಯವಸ್ಥೆ, ಸಾರ್ವಜನಿಕರಿಗೆ ಬೇಕಾಗುವ ಸಹಾಯವಾಣಿ ಕೇಂದ್ರ, ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಹೆಚ್ಚಿನ ನಿಗಾವಹಿಸುವುದು ಮತ್ತು ಮತದಾನ ಕೇಂದ್ರಕ್ಕೆ ಆಗಮಿಸುವ ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯ ಸೇರಿದಂತೆ ಹಲವಾರು ಪ್ರಮುಖ ಕೆಲಸಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಆರ್.ಓ ಮತ್ತು ಎ ಆರ್ ಓ.ಬಿಎಲ್ ಓ ಅವರು ತಮಗೆ ವಹಿಸಿರುವ ಕರ್ತವ್ಯದ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ವ್ಯವಸ್ಥೆ ಮಾಡಲಾಗುತ್ತದೆ. ಮತದಾರರಿಗೆ ಬ್ಯಾಲೆಟ್ ನಮೂನೆಗಳು ಸಹ ಶೀಘ್ರವಾಗಿ ತಯಾರಿಸಲು ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಲೋಪದೋಷಗಳು ಆಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ಒದಗಿಸಿದರು.

ನಂತರದಲ್ಲಿ ನಗರದ ಸೇಂಟ್ ಮೇರಿಸ್ ಶಾಲೆಗೆ ತೆರಳಿ ಚುನಾವಣೆಯ ಮತ ಎಣಿಕೆ ಕೇಂದ್ರವನ್ನೂ ಸಹ ವೀಕ್ಷಿಸಿದರು. 

ತಹಶೀಲ್ದಾರ್‍ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಈಗಾಗಲೇ 23 ಗ್ರಾಮ ಪಂಚಾಯತಿಗಳ ಚುನಾವಣೆಯಲ್ಲಿ ಒಟ್ಟು 1199 ನಾಮ ಪತ್ರಗಳು ಸಲ್ಲಿಕೆ ಆಗಿವೆ ನಾಮ ಪತ್ರಗಳನ್ನು ಪರಿಶೀಲನೆ ನಡೆಸಿ ನಂತರದಲ್ಲಿ ಕಣದಲ್ಲಿ ಎಷ್ಟು ಅಭ್ಯರ್ಥಿಗಳು ಉಳಿದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಅಧಿಕಾರಿ ಹಂಸವೇಣಿ,  ಚುನಾವಣಾ ನೋಡಲ್ ಅಧಿಕಾರಿ ಲೋಹಿತ್, ಸಿಬ್ಬಂದಿಗಳಾದ ಆರ್. ಐ. ಆನಂದ್, ಉಮೇಶ್, ಸಂತೋಷ್ ಇತರರು ಹಾಜರಿದ್ದರು, 

error: Content is protected !!