ಹರಿಹರ, ಡಿ.12- ನೆರೆ ರಾಜ್ಯಗಳಂತೆ ರಾಜ್ಯದ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಸಾರಿಗೆ ನೌಕರರು ಇಂದು ಬಸ್ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿ, ಶಾಸಕ ಎಸ್. ರಾಮಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಶಾಸಕ ರಾಮಪ್ಪ, ಸಾರಿಗೆ ನೌಕರರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಅನೇಕ ಜನರ ಜೀವದ ಜವಾಬ್ದಾರಿ ಇವರ ಮೇಲಿರುತ್ತದೆ. ಇಂತಹ ಜವಾಬ್ದಾರಿಯುತ ಕಾರ್ಯ ನಿರ್ವಹಿಸುವ ಸಾರಿಗೆ ನೌಕರರಿಗೆ ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬೇಕು. ಒಂದು ವೇಳೆ ನೀಡದೆ ಹೋದರೆ, ಸಾರಿಗೆ ನೌಕರರಿಗೆ ಬೆಂಬಲವಾಗಿ ನಿಂತು ಹೋರಾಟ ಮಾಡಲು ಸಿದ್ಧವಿರುವುದಾಗಿ ಹೇಳಿದರು.
ಸಾರಿಗೆ ನೌಕರರ ಮುಖಂಡರು ಮಾತನಾಡಿ ರಾಜ್ಯ ಕ.ರಾ.ರ.ಸಾ. ಸಂಸ್ಥೆಯ ನಾಲ್ಕು ನಿಗಮಗಳಲ್ಲಿ 1.25 ಲಕ್ಷ ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರ ತನ್ನ ಅಧೀನದಲ್ಲಿರುವ ಎಲ್ಲಾ ಸರ್ಕಾರಿ ನೌಕರರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತದೆ. ಆದರೆ ಸರ್ಕಾರದ ಆಣತಿಯಂತೆ ನಡೆಯುತ್ತಿರುವ ಸಾರಿಗೆ ನೌಕರರಿಗೆ ವೇತನ ಶೇ.40 ರಷ್ಟು ಕಡಿಮೆ ಇದೆ. ಅತಿಯಾದ ಒತ್ತಡದಲ್ಲಿ ಕಾರ್ಯನಿರ್ವಹಿಸುವ ನಮಗೆ ಆರೋಗ್ಯ ಭಾಗ್ಯ ಸೌಲಭ್ಯ ಇಲ್ಲ ಎಂದು ದೂರಿದರು.
ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ : ನಗರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಇರದೆ ನಿಲ್ದಾಣ ಬಿಕೋ ಎನ್ನುತ್ತಿತ್ತು. ಪರಸ್ಥಳದಿಂದ ಬಂದಂತಹ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಪರದಾಡುತ್ತಿರುವ ದೃಶ್ಯ ನಿಲ್ದಾಣದಲ್ಲಿ ಕಂಡು ಬಂತು.
ಸಂಸ್ಥೆಯ ನಾಲ್ಕು ನಿಗಮಗಳ ನೌಕರರು ಸತತವಾಗಿ ಮೂರು ವರ್ಷಗಳಿಂದ ಮುಖ್ಯಮಂತ್ರಿಗಳಿಗೆ, ಸಾರಿಗೆ ಮಂತ್ರಿಗಳಿಗೆ ಹಲವು ಶಾಸಕರಿಗೆ ಮನವಿ ಮಾಡಲಾಗಿದೆ. ಜೊತೆಯಲ್ಲಿ ಪತ್ರ ಚಳುವಳಿ, ಕಪ್ಪುಪಟ್ಟಿ, ಭಿತ್ತಿಪತ್ರ ಪ್ರದರ್ಶನ ಚಳುವಳಿ ಹೀಗೆ ವಿಭಿನ್ನ ಶಾಂತಿಯುತ ಹೋರಾಟಗಳನ್ನು ಮಾಡಿ ಸರ್ಕಾರದ ಗಮನವನ್ನು ಸೆಳೆದರೂ ಇದುವರೆಗೆ ನಮ್ಮ ಬೇಡಿಕೆಯನ್ನು ಈಡೇರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಸಾರಿಗೆ ನೌಕರರ ಕಷ್ಟಗಳ ನಿವಾರಣೆಗೆ ಆದಷ್ಟೂ ಬೇಗ ಸಮಿತಿಯ ವರದಿಯನ್ನು ಪಡೆದು ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳನ್ನು ಸರ್ಕಾರದಲ್ಲಿ ವಿಲೀನ ಗೊಳಿಸಿ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಿಗೆ ಇರುವಂ ತಹ ಎಲ್ಲಾ ಸೌಲಭ್ಯಗಳನ್ನು ನೀಡಿ, ನಮ್ಮ ದಶಕಗಳ ಕಷ್ಟ ನಿವಾರಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಾಗೇಂದ್ರ, ಟಿ. ಹನುಮಂತಪ್ಪ, ರಾಜೀವ್, ಶ್ರೀಹರಿ, ಬಾಬಾಜಾನ್, ಇರ್ಫಾನ್, ಕೊಟ್ರೇಶ್, ಬಿ. ಬಸವರಾಜ್, ಶಂಕರ್ ಸಿಂಗ್ ಹಜಾರೆ, ರಫೀಕ್, ಮಲ್ಲಮ್ಮ, ಸುಮಾ ಬಡಿಗೇರ, ಬಿ. ರೇಣುಕಾ, ಪಿ. ಸುರೇಖಾ ಇನ್ನಿತರರಿದ್ದರು.