ಕುರುಬರ ಎಸ್ಟಿ ಹೋರಾಟ ರಾಜಕೀಯಕ್ಕೆ ಅಲ್ಲ

ಬೃಹತ್ ಸಮಾವೇಶದ ಪೂರ್ವಾಭಾವಿ ಸಭೆ ಉದ್ಘಾಟಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ

ದಾವಣಗೆರೆ, ಡಿ.12- ಭಗವಂತನಾಣೆಗೂ ರಾಜಕಾರಣ ಕ್ಕಾಗಿ ಎಸ್ಟಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದರು.

ನಗರದ ಬೀರೇಶ್ವರ ಭವನದಲ್ಲಿ ಶನಿವಾರ ಕುರುಬ ಸಮಾಜದ ಎಸ್ಟಿ ಹೋರಾಟ ಸಮಿತಿ, ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ ಹಾಗೂ ಕರ್ನಾ ಟಕ ಪ್ರದೇಶ ಕುರುಬ ಸಂಘ ದಿಂದ  ಹಮ್ಮಿಕೊಂಡಿದ್ದ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ವಿಭಾಗ ಮಟ್ಟದ ಬೃಹತ್ ಸಮಾ ವೇಶದ ಪೂರ್ವಭಾವಿಸಭೆ ಉದ್ಘಾ ಟಿಸಿ ಅವರು ಮಾತನಾಡಿದರು.

ಕಾಗಿನೆಲೆ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮತ್ತು ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವ ರಾನಂದ ಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಎಸ್ಟಿ ಮೀಸಲಾತಿ ಹೋರಾಟ ನಡೆಯುತ್ತಿದೆ. ಇದು ರಾಜಕಾರಣಕ್ಕಾಗಿ ನಡೆಯುತ್ತಿರುವ ಹೋರಾಟ ಅಲ್ಲ ಎಂದರು.

ನಾನು ರಾಜಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ನಾನು ಹಿಂದುತ್ವವನ್ನೇ ಪ್ರತಿಪಾದಿಸುವವನು. ಕುರುಬರು ಹಿಂದುತ್ವದಲ್ಲೇ ಇದ್ದಾರೆ. ಇಂತಹ ಸಮಾಜವನ್ನು ಮೇಲೆತ್ತಿದರೆ ಹಿಂದುತ್ವಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದರು.

ಸಂಘಟಿತರಾಗಿ ಹೋರಾಟ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಗಮನ ಸೆಳೆದಾಗ ಮಾತ್ರ ಮೀಸಲಾತಿ ಸಿಗಲು ಸಾಧ್ಯ. ಅದನ್ನು ನಾವು ಪಡೆಯಲು ಹೊರಟಿದ್ದೇವೆ ಎಂದರು.

ಸಮಾಜದ ಬಗ್ಗೆ ಶ್ರೀಗಳು ನನ್ನ ಕಣ್ಣು ತೆರೆಸಿದ್ದಾರೆ. ಇದೀಗ  ಸಮಾಜದ ಋಣ ತೀರಿಸುವ ಕಾಲ ಬಂದಿದೆ. ಹೀಗಾಗಿ ನಾನು ಎಸ್ಟಿ ಮೀಸಲಾತಿ ಕೊಡಿಸಲು ಹೋರಾಟಕ್ಕೆ ಮುಂದಾಗಿದ್ದೇನೆ ಎಂದರು.

ಕುರುಬರಿಗೆ ಎಸ್‌ಟಿ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಎಲ್ಲಾ ‌ನಾಯಕರನ್ನು ಸೇರಿಸಿ ಒಂದು ಕಮಿಟಿಯನ್ನು ಮಾಡಿದ್ದೇವೆ. ಕೇಂದ್ರದಲ್ಲಿ ಎಲ್ಲಾ ಸಚಿವರನ್ನು ಹಾಗೂ ನಾಯಕರನ್ನು ಭೇಟಿ ಮಾಡಲಾಗಿದೆ. ಮೀಸಲಾತಿ ನೀಡುವಂತೆ ಕೋರಲಾಗಿದೆ ಎಂದು ಹೇಳಿದರು.

ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಸ್ವಾಮೀಜಿ ಮಾತನಾಡಿ, ಮೀಸಲಾತಿ ಹೋರಾಟದಲ್ಲಿ ಸಮಾಜದ ಪ್ರತಿಯೊಬ್ಬರೂ  ತೊಡಗಿಸಿಕೊಂಡರೆ ಮುಂದೆ ನಿಮ್ಮ ಮಕ್ಕಳ ಭವಿಷ್ಯ ಉಜ್ವಲ ಆಗಲಿದೆ ಎಂದು ಹೇಳಿದರು.

ಕುರುಬರಿಗೆ ಎಸ್ಟಿ ಮೀಸಲಾತಿ ಹೋರಾಟ ಯಾರ ಪರ ಅಥವಾ ವಿರೋಧ ಅಲ್ಲ. ಇದು ಸಮಾಜದ ಜನತೆಗಾಗಿ ನಡೆಸುವ ಹೋರಾಟ. ಇಲ್ಲಿ ಈಶ್ವರಪ್ಪನವರೂ ಪಾಲ್ಗೊಂಡಿದ್ದಾರೆ. ಕಾಗಿನೆಲೆ ಗುರುಪೀಠ ಇದರ ನೇತೃತ್ವ ವಹಿಸಿದೆ ಎಂದರು.

ಸಭೆ ಉದ್ಘಾಟನೆಗೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಹೊಸ ದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ, ಹೋರಾಟವನ್ನು ಯಾವುದೇ ಪಕ್ಷಕ್ಕೆ ಸೀಮಿತಗೊಳಿಸಿ ಮಾತನಾಡಿ ದರೆ ಅದು ತಾಯಿಗೆ ಮಾಡಿದ ದ್ರೋಹ ಎಂದು ಎಚ್ಚರಿಸಿದರು.

ಕಟ್ಟ ಕಡೆಯ ಕುರುಬನ ಮಗುವಿನ ಭವಿಷ್ಯ ಉಜ್ವಲವಾಗಬೇಕೆಂಬ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಇದಕ್ಕೆ ವಿರೋಧ ಸಲ್ಲದು. ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗೆ ನಮ್ಮ ಕೂಗು ಕೇಳುವವರೆಗೆ ಹೋರಾಟ ಮಾಡುತ್ತೇವೆ ಎಂದರು.

ಕುರಿ ಕಾಯುವ ಕುರುಬ ಕುರಿಗಳನ್ನು ಗುಡ್ಡಕ್ಕೆ ಕರೆದೊಯ್ಯದೆ ಕಟುಕನಿಗೆ ತೋರಿಸಿ ರೇಟ್ ಫಿಕ್ಸ್ ಮಾಡುತ್ತಾನೆ. ಅಂತಹವರ ಬಗ್ಗೆ ಎಚ್ಚರದಿಂದಿರಬೇಕು ಎಂದು ಸಮಾಜದ ಮುಖಂಡ ಕೆ.ಎನ್. ಮುಕುಡಪ್ಪ ಹೇಳಿದರು.

ಯಾವ ಹೇಳಿಕೆಗಳಿಗೂ ತಲೆ ಕೆಡಿಸಿಕೊಳ್ಳದೆ ಶ್ರೀಗಳ ನೇತೃತ್ವದಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.

ಇದೇ ವೇಳೆ ಎಸ್.ಟಿ. ಹೋರಾಟ ಸಮಿತಿ ಮಹಿಳಾ ರಾಜ್ಯಾಧ್ಯಕ್ಷರಾಗಿ ಜೀವ್ಹೇಶ್ವರಿ ಅವರನ್ನು ಆಯ್ಕೆ ಮಾಡಲಾಯಿತು.

ಸಮಾಜದ ಮುಖಂಡರಾದ ಕೆ.ಮುಕುಡಪ್ಪ, ಶಿವಣ್ಣ ಮೇಷ್ಟ್ರು, ಬಿ.ಎಂ. ಸತೀಶ್, ಸೊಕ್ಕೆ ನಾಗರಾಜ್, ಕುಂಬಳೂರು ವಿರೂಪಾಕ್ಷಪ್ಪ, ರಾಜನಹಳ್ಳಿ ಶಿವಕುಮಾರ್, ಗಾಜಿಗೌಡ್ರು, ಜಿ.ಪಂ. ಸದಸ್ಯ  ಜಿ.ಎಸ್.  ನಿಂಗಣ್ಣ,  ಪಾಲಿಕೆ ಸದಸ್ಯ ಪ್ರಸನ್ನಕುಮಾರ್, ಜಯಮ್ಮ, ದಿಳ್ಳೆಪ್ಪ, ಕೆ.ಆರ್. ಜಯಶೀಲ, ನಾಗೇಂದ್ರಪ್ಪ, ಭೋಜರಾಜ್, ಎನ್.ಮಂಜುನಾಥ, ಗೌಡ್ರ ಚನ್ನಬಸಪ್ಪ, ಭೋಜರಾಜ್, ಸುಜಾತ ಹಾಲಸಿದ್ದಪ್ಪ, ಮಾರುತಿ ಹರಿಹರ, ಎಸ್.ಕೆ. ಕರಿಯಣ್ಣ, ನಾಗೇಂದ್ರಪ್ಪ ಇತರರು ಉಪಸ್ಥಿತರಿದ್ದರು. ಎಂ.ಮಂಜುನಾಥ ಸ್ವಾಗತಿಸಿದರು.

error: Content is protected !!