ಖಾಸಗಿ ಶಿಕ್ಷಕರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ

ಜಗಳೂರಿನ ಕಾರ್ಯಕ್ರಮದಲ್ಲಿ ಖಾಸಗಿ ಶಿಕ್ಷಕರ ಬಳಗದ ಜಿಲ್ಲಾಧ್ಯಕ್ಷ ರಂಗನಾಥ್

ಜಗಳೂರು, ಡಿ.13 – ಕೊರೊನಾ ಮಹಾಮಾರಿ ಆಕ್ರಮಣದ ಪರಿಣಾಮ ಖಾಸಗಿ ಶಾಲೆ ಶಿಕ್ಷಕರು ಹಾಗೂ ಉಪನ್ಯಾಸಕರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ಸರ್ಕಾರ ಅವರಿಗೆ ನೆರವಾಗಬೇಕು ಎಂದು  ಕರ್ನಾಟಕ‌ ರಾಜ್ಯ ಖಾಸಗಿ ಶಿಕ್ಷಕರ ಬಳಗದ ಜಿಲ್ಲಾಧ್ಯಕ್ಷ ರಂಗನಾಥ್ ಮನವಿ ಮಾಡಿದರು.

ಪಟ್ಟಣದ ಪ್ರೇರಣಾ ಸಮಾಜಸೇವಾ ಚರ್ಚ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಹಾಗೂ ಉಪನ್ಯಾಸಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಖಾಸಗಿ ಶಾಲಾ, ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಯ ಮೂಲಕರ್ತೃಗಳಾಗಿ ಕೇವಲ ಗೌರವ ಧನಕ್ಕೆ ಶ್ರಮಿಸುತ್ತಿದ್ದಾರೆ. ಆದರೆ ಪ್ರಸಕ್ತ ಸಾಲಿನಲ್ಲಿ ಕೊರೊನಾ ಹೆಮ್ಮಾರಿಗೆ ಸಿಲುಕಿ ಲಾಕ್ ಡೌನ್ ಅವಧಿ ಯಿಂದ ಶಾಲಾ ಕಾಲೇಜುಗಳು ಬಾಗಿಲು ಮುಚ್ಚಿರುವುದ ರಿಂದ ನಯಾಪೈಸೆಯೂ ಗಳಿಸದೆ ಬದುಕು ದುಸ್ತರವಾಗಿ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ ಎಂದರು. 

ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ್ ಮಾತನಾಡಿ, ಬರಪೀಡಿತ ತಾಲ್ಲೂಕಿನಲ್ಲಿ ಯಾವುದೇ ಆದಾಯದ ಮೂಲಗಳಿಲ್ಲದೆ ಬಿ.ಎಡ್, ಡಿ.ಎಡ್, ಐಟಿಐ, ವೃತ್ತಿಪರ ಶಿಕ್ಷಣ ಹಾಗೂ ಸ್ನಾತಕೋತ್ತರ ಪದವಿ ಪಡೆದ ನಿರುದ್ಯೋಗಿ ವಿದ್ಯಾವಂತ ಯುವಕರು ದುಡಿಮೆಗೆ ವಲಸೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ಖಾಸಗಿ ಶಾಲಾ ಕಾಲೇಜುಗಳನ್ನು ಅವಲಂಬಿಸಿದ್ದು, ಜೀವನ ಭದ್ರತೆಯಿಲ್ಲದೆ ಪರದಾಡುವಂತಾಗಿದೆ ಎಂದು ಅಳಲು ತೊಡಿಕೊಂಡರು.

ಜ್ಞಾನ ತರಂಗಿಣಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಪಿ.ಎಸ್. ಅರವಿಂದನ್ ಮಾತನಾಡಿದರು. 

ಈ ಸಂದರ್ಭದಲ್ಲಿ ಪ್ರೇರಣ ಚರ್ಚ್‍ನ ಫಾದರ್‌ ವಿಲಿಯಂ ಮಿರಾಂದ, ಫಾದರ್ ಸುನೀಲ್, ಸೂಜ್ ಸಂಘದ ತಾಲ್ಲೂಕು ಕಾರ್ಯದರ್ಶಿ ಗಿರಿಪ್ರಸಾದ್, ತಾಲ್ಲೂಕು ಉಪಾಧ್ಯಕ್ಷ ತಿಮ್ಮರಾಜ್, ಗೌರವಾಧ್ಯಕ್ಷ ಗುರುಸ್ವಾಮಿ ಹಾಗೂ ಪದಾಧಿಕಾರಿಗಳು  ಭಾಗವಹಿಸಿದ್ದರು.

error: Content is protected !!