3ನೇ ದಿನವೂ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ

ದಾವಣಗೆರೆ, ಡಿ.13- ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ನಗರದಲ್ಲಿ ಕೆಎಸ್ಆರ್‌ಟಿಸಿ ನೌಕರರು 3ನೇ ದಿನವಾದ ಇಂದೂ ಸಹ ಮುಷ್ಕರ ನಡೆಸಿದರು.

ಸೇವೆಯಿಂದ ದೂರ ಉಳಿದ ನೌಕರರು, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಧರಣಿ ಹೂಡಿ ಬೇಡಿಕೆ ಈಡೇರಿಕೆಗೆ ಬಿಗಿಪಟ್ಟು ಹಿಡಿದಿದ್ದರು. ಇಂದು ಸಹ ಪಟ್ಟು ಸಡಿಲಿಸದೇ ಬೆಳಗ್ಗೆಯಿಂದ ಸಂಜೆವರೆಗೂ ಉಪವಾಸ ಸತ್ಯಾಗ್ರಹ ನಡೆಸಿ ಅನಿರ್ದಿಷ್ಟ ಮುಷ್ಕರ ತೀವ್ರಗೊಳಿಸಿ ಸರ್ಕಾರದ ಗಮನ ಸೆಳೆದರು.

ಮುಷ್ಕರದಿಂದ ಶುಕ್ರವಾರದಂತೆ ಇಂದೂ ಸಹ ಬಸ್‍ಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಬಸ್ ಗಳ ಸೇವೆ ಇಲ್ಲದೇ ಪರದಾಡುವುದು ತಪ್ಪಲಿಲ್ಲ. ದುಪ್ಪಟ್ಟು ಹಣ ಕೊಟ್ಟು ಖಾಸಗಿ ಬಸ್, ಇತರೆ ಖಾಸಗಿ ವಾಹನಗಳಲ್ಲಿ ಸಂಚರಿಸಬೇಕಾಯಿತು. 

ಕಾಂಗ್ರೆಸ್ ಬೆಂಬಲ: ಸಾರಿಗೆ ನೌಕರರ ಮುಷ್ಕರಕ್ಕೆ ಇಂದು ಸಹ ಜಿಲ್ಲಾ ಕಾಂಗ್ರೆಸ್, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದರು. 

ಈ ವೇಳೆ ಕಾಂಗ್ರೆಸ್ ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಡಿ. ಬಸವರಾಜ್, ಕೆ.ಜಿ. ಶಿವಕುಮಾರ್, ಟಿ. ಶಿವಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ
ಮಾಲತೇಶ್  ರಾವ್ ಜಾಧವ್, ದಾಕ್ಷಾಯಣಮ್ಮ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು,
ರೈತ ಸಂಘದ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಶೇಖರ್ ನಾಯ್ಕ, ಕೆಎಸ್‍ಆರ್‍ಟಿಸಿ ನೌಕರರ ಕೂಟದ ಓಂಕಾರಪ್ಪ, ಅಂಜಿನಪ್ಪ, ಅಕ್ಕಿ ಶಿವಕುಮಾರ್, ಸೂಡಂಬಿ ಮಂಜುನಾಥ, ದಾದಾಪೀರ್ ಸೇರಿದಂತೆ ಇತರರು ಇದ್ದರು.

error: Content is protected !!