ರೈತ ವಿರೋಧಿ ಕಾಯ್ದೆ ವಿರೋಧಿಸಿ ಪ್ರತಿಭಟನಾ ಜಾಥಾ

ದಾವಣಗೆರೆ, ಡಿ.10- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಬಿಲ್ ಕಾಯ್ದೆ ಸೇರಿದಂತೆ ರೈತ ವಿರೋಧಿ, ಜನ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರೈತ ಕೃಷಿ-ಕಾರ್ಮಿಕರ ಸಂಘಟನೆ (ಆರ್‍ಕೆಎಸ್) ರಾಜ್ಯ ಸಮಿತಿಯ ಕರೆಗೆ ಇಂದು ಆರ್‍ಕೆಎಸ್ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕಿನ ಮಾಯಕೊಂಡ ಗ್ರಾಮದಲ್ಲಿ ಜಮಾಯಿಸಿದ್ದ ಸಮಿತಿ ಪದಾಧಿಕಾರಿಗಳು, ಮಸೂದೆಗಳ ಪ್ರತಿಗಳನ್ನು ಸುಟ್ಟು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಆರ್‍ಕೆಎಸ್ ರಾಜ್ಯಾಧ್ಯಕ್ಷೆ ಸುನೀತ ಕುಮಾರ್ ಮಾತನಾಡಿ, ಸರ್ಕಾರದ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯಿಂದ ಜನರಲ್ಲಿ ಆಹಾರದ ಅಸಮತೋಲನಕ್ಕೆ ಎಡೆಮಾಡಿಕೊಡುತ್ತದೆ. ಇಂದಿನ ನಿರುದ್ಯೋಗದಿಂದ ಜನರು ಆರ್ಥಿಕವಾಗಿ ದಿವಾಳಿಯಾಗಿರುವಾಗ ಬೆಲೆ ಏರಿಕೆಯಿಂದ ತಲ್ಲಣಗೊಂಡಿದ್ದಾರೆ. ಶಿಕ್ಷಣ, ಆರೋಗ್ಯ, ವ್ಯಾಪಾರೀಕರಣ ಈ ಎಲ್ಲಾ ಭೀಕರ ಸಮಸ್ಯೆಗಳೇ ಜನರ ಹೋರಾಟಕ್ಕೆ ಕಾರಣವಾಗಿವೆ ಎಂದು ತಿಳಿಸಿದರು.

ನಂತರ ಬಾವಿಹಾಳ್, ಆನಗೋಡು ಗ್ರಾಮಗಳಲ್ಲಿ ಈ ಪ್ರತಿಭಟನಾ ಜಾಥಾ ಮುಂದುವರೆಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ತಿಪ್ಪೇಸ್ವಾಮಿ ಅಣಬೇರು, ಸಂಘಟನಾಕಾರರಾದ ಮಧು ತೊಗಲೇರಿ, ಪರಶುರಾಮ್, ಭಾರತಿ, ನಾಗಜ್ಯೋತಿ, ಕಾವ್ಯ, ಸ್ಮಿತಾ, ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ಜಿಲ್ಲಾ ನಾಯಕರಾದ ಪ್ರತಾಪ್, ಅಶೋಕ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

error: Content is protected !!