ದಾವಣಗೆರೆ, ಡಿ.10- 2004 ರಲ್ಲಿ ರಾಷ್ಟ್ರದಲ್ಲಿ ಸೋನಿಯಾಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಇಡೀ ರಾಷ್ಟ್ರವೇ ಸೋನಿಯಾಜೀ ಪ್ರಧಾನಿಯಾಗಬೇಕೆಂದು ಬಯಸಿದ್ದರೂ ಸಹ, ತಾವು ಹುದ್ದೆ ಅಲಂಕರಿಸದೆ ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್ ಅವರಿಗೆ ಪ್ರಧಾನಮಂತ್ರಿ ಹುದ್ದೆ ನೀಡುವ ಮೂಲಕ ತ್ಯಾಗಮಯಿಯಾದರು ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಎಂದು ಹೇಳಿದರು.
ನಗರದ ವನಿತಾ ಸಮಾಜದ ಹಿರಿಯ ವನಿತೆಯರ ಆನಂದಧಾಮದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದಿಂದ ನಿನ್ನೆ ಏರ್ಪಡಿಸಿದ್ದ ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ಅವರ 74ನೇ ಜನ್ಮ ದಿನ ಹಿನ್ನೆಲೆಯಲ್ಲಿ ಹಿರಿಯ ಜೀವಗಳಿಗೆ ಹಣ್ಣು ವಿತರಿಸಿ ಅವರು ಮಾತನಾಡಿದರು.
ಸೋನಿಯಾಗಾಂಧಿ ಅವರು ರಾಜಕೀಯ ಮುತ್ಸದ್ಧಿ ನಾಯಕಿಯಾಗಿದ್ದು, ಕಾಂಗ್ರೆಸ್ ಪಕ್ಷದ 135 ವರ್ಷಗಳ ಇತಿಹಾಸದಲ್ಲಿ ದೀರ್ಘಕಾಲ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದಾರೆ. ಯುಪಿಎ ಅಧ್ಯಕ್ಷರಾಗಿ 2004 ರಿಂದ 14 ರವರೆಗೆ ರಾಷ್ಟ್ರದ ಚುಕ್ಕಾಣಿ ಹಿಡಿದಿದ್ದ ಮನಮೋಹನ್ ಸಿಂಗ್ ಅವರಿಗೆ ಮಾರ್ಗದರ್ಶನ ಮಾಡಿ, ಬಡವರ ಹಾಗೂ ಜನಪರ ಕಾರ್ಯಕ್ರಮ ಜಾರಿಗೆ ತಂದರು. ಸೋನಿಯಾಗಾಂಧಿ ಅವರ ಕನಸಿನ ಯೋಜನೆಗಳಾದ ಆಹಾರ ಭದ್ರತೆ, ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸೋನಿಯಾಗಾಂಧಿ ಅವರು ಶ್ರಮಿಸುವ ಮೂಲಕ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕೋಮುವಾದಿಗಳು ಪದೇ ಪದೇ ವಿದೇಶಿ ಮಹಿಳೆಯೆಂದು ಸೋನಿಯಾ ಅವರನ್ನು ಟೀಕಿಸಿದ್ದಕ್ಕೆ ಸರಿಯಾದ ಉತ್ತರ ನೀಡಿದ ಅವರು, ಭಾರತ ನನ್ನ ಮನೆ, ನನ್ನ ದೇಶ, ನಾನು ಇಲ್ಲಿಯೇ ಕೊನೆಯುಸಿರು ಎಳೆಯುತ್ತೇನೆ. ನನ್ನ ಅಸ್ಥಿಯು ಭಾರತದ ಮಣ್ಣಿನಲ್ಲಿಯೇ ವಿಲೀನಗೊಳ್ಳುತ್ತದೆ. ಭಾರತದೊಂದಿಗೆ ನನ್ನ ಬಾಂಧವ್ಯ ಎಂದು ಹೇಳುವ ಮೂಲಕ ಸೋನಿಯಾಜೀ ಅವರು ರಾಷ್ಟ್ರಪೇಮ ಮೆರೆದಿದ್ದಾರೆ ಎಂದು ಶ್ಲಾಘಿಸಿದರು.
ಈ ವೇಳೆ ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಮಂಜುನಾಥ ಗಡಿಗುಡಾಳ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಕೆ.ಎಂ. ಮಂಜುನಾಥ, ಬಿ.ಶಿವಕುಮಾರ್, ಎಂ.ಕೆ. ಲಿಯಾಖತ್ ಆಲಿ, ಬಾಷಾ ಆರ್‍ಬಿಜೆಡ್, ವಿ.ಶ್ರೀನಿವಾಸ್ ಮತ್ತು ಇತರರು ಇದ್ದರು.