ಹರಿಹರ: ಬಂದ್‌ಗೆ ನೀರಸ ಪ್ರತಿಕ್ರಿಯೆ

ಹರಿಹರ, ಡಿ.5- ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಖಂಡಿಸಿ ನಗರದ ವಿವಿಧ ಕನ್ನಡ ಪರ ಸಂಘಟನೆಗಳು ನೀಡಿದ್ದ ಬಂದ್‌ ಕರೆಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಕನ್ನಡ ರಕ್ಷಣಾ ವೇದಿಕೆ, ಅಖಂಡ ಕರ್ನಾಟಕ ರಕ್ಷಣಾ ವೇದಿಕೆ, ಸೇರಿದಂತೆ 6 ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳ ವತಿಯಿಂದ  ಬಂದ್‌ಗೆ ಇಂದು ಕರೆ ನೀಡ ಲಾಗಿದ್ದು,  ಜನಜೀವನ ಎಂದಿನಂತೆಯೇ ಕಂಡುಬಂದಿತ್ತು.

ಪ್ರತಿಭಟನಾಕಾರರು ಅನೇಕ ವ್ಯಾಪಾರಿ ಕೇಂದ್ರಗಳನ್ನು ಬಂದ್ ಮಾಡಿಸುವುದಕ್ಕೆ ಮುಂದಾದಾಗ ಕೆಲ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿದರೂ, ನಂತರದಲ್ಲಿ ಪ್ರತಿಭಟನಾಕಾರರು ಮುಂದೆ ಸಾಗುತ್ತಿದ್ದಂತೆ ಮತ್ತೆ ಅಂಗಡಿಗಳನ್ನು ತೆರೆದು ಮಾಮೂಲಿಯಂತೆ ವ್ಯಾಪಾರ ವಹಿವಾಟು ನಡೆಸಿದರು. ಎಲ್ಲಾ ವ್ಯಾಪಾರಿ ಮಳಿಗೆಗಳಲ್ಲಿ ದಿನ ನಿತ್ಯದಂತೆ ವ್ಯಾಪಾರ ವಹಿವಾಟು ನಡೆಯಿತು. ಹಣ್ಣು, ಬೀಡಾ ಅಂಗಡಿ, ಚಪ್ಪಲಿ ಅಂಗಡಿಗಳನ್ನು ಬೆಳಗ್ಗೆ ಮಾತ್ರ ಬಂದ್ ಮಾಡಿದ್ದು, ಮಧ್ಯಾಹ್ನ ವ್ಯಾಪಾರ ವಹಿವಾಟು ನಡೆಸಿದವು. ಬಸ್ , ಆಟೋ, ಟ್ಯಾಕ್ಸಿ, ಇನ್ನಿತರೆ ವಾಹನಗಳ ಸಂಚಾರ ಮಾಮೂಲಿಯಾಗಿಯೇ ಇತ್ತು. 

ನಗರದ ಮುಖ್ಯ ರಸ್ತೆ, ದೇವಸ್ಥಾನ ರಸ್ತೆ, ಹೆಚ್. ಶಿವಪ್ಪ ವೃತ್ತ, ಪಿ.ಬಿ. ರಸ್ತೆ, ರಾಣಿ ಚೆನ್ನಮ್ಮ ವೃತ್ತದಲ್ಲಿ ವ್ಯಾಪಾರ ವಹಿವಾಟುಗಳು ಎಂದಿನಂತೆ ತಮ್ಮ ಕಾರ್ಯವನ್ನು ನಿರ್ವಹಿಸಿದ್ದು ಕಂಡು ಬಂತು.

ಮುಖಂಡರಾದ ಹೆಚ್. ಕೆ. ಕೊಟ್ರಪ್ಪ ಹಾಗೂ ನಾಗರಾಜ್ ಮೆಹರ್ವಾಡೆ ಮಾತನಾಡಿ, ರಾಜ್ಯದ ಕನ್ನಡಿಗರ ತಾಳ್ಮೆ ಪರೀಕ್ಷಿಸಲು ಸರ್ಕಾರ ಜಾತಿಗೊಂದು ನಿಗಮಗಳ ಪ್ರಾಧಿಕಾರ ರಚಿಸಲು ಮುಂದಾಗಿರುವುದು ಸರಿಯಲ್ಲ. ತಮ್ಮ ಪಕ್ಷದ ಬೆಳವಣಿಗೆಗೆ ಅನುಕೂಲವಾಗಲಿದೆ ಎಂಬ ನಿಟ್ಟಿನಲ್ಲಿ ಮಾತ್ರ ಯೋಚಿಸಿದೆ.  ಗಡಿಯ ಬಗ್ಗೆ ಮಹಾರಾಷ್ಟ್ರದ ಶಿವಸೇನೆ, ಎಂ.ಇ.ಎಸ್.ಗಳ ಅಸಭ್ಯ ವರ್ತನೆ ನಮಗೆಲ್ಲಾ ತಿಳಿದದ್ದೆ. ಹೀಗಿರುವಾಗ ಮರಾಠಿಗರ ಪರವಾಗಿ ಸರ್ಕಾರ ಪ್ರಾಧಿಕಾರ ರಚಿಸಲು ಮುಂದಾಗಿರುವುದು ಕೇವಲ ಮತಗಳಿಕೆಗಾಗಿ ಅಷ್ಟೇ. ಸರ್ಕಾರ ಕೂಡಲೇ ಈ ನಿರ್ಧಾರವನ್ನು ಬಿಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಾಗರಾಜ್ ಗೌಡ, ರಾಜು ಆಟೋ, ಲಿಂಗರಾಜ್, ಬಾಲಸುಬ್ರಹ್ಮಣ್ಯ, ಇಲಿಯಾಸ್ ಆಹ್ಮದ್, ರಾಜು, ಗೌಸ್‌ಪೀರ್, ಅರುಣ್, ಖದ್ರೀಶ್, ಶಶಿಕುಮಾರ್, ಕೆ.ಆರ್. ಕೊಟ್ರೇಶ್, ಭೀರಪ್ಪ, ದೇವರಾಜ್, ಬಿ.ಎಂ. ರಹಮತ್‌ವುಲ್ಲಾ, ಹೆಚ್. ಶಿವಪ್ಪ, ಶೇಖ್‌ ಅಹ್ಮದ್, ಜಿಯಾವುಲ್ಲಾ ಇನ್ನಿತರರಿದ್ದರು.

error: Content is protected !!