ಹರಪನಹಳ್ಳಿ, ಡಿ.5- ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಪಶು ಆಸ್ಪತ್ರೆಗೆ ಶಾಸಕ ಜಿ.ಕರುಣಾಕರ ರೆಡ್ಡಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಪಶು ಆಸ್ಪತ್ರೆಗೆ ತೆರಳಿದ ಅವರು ಸಿಬ್ಬಂದಿಗಳ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು. ಕಚೇರಿಗೆ ಬಂದು ಸಮಯ ಆಗಿದ್ದರು ಇನ್ನೂ ಯಾಕೆ ಸಹಿ ಮಾಡಿಲ್ಲ ಎಂದು ಸಿಬ್ಬಂದಿಗಳಿಗೆ ಶಾಸಕರು ಕೇಳಿದರು. ನಂತರ ಪಶು ಆಸ್ಪತ್ರೆಯ ಔಷಧ ದಾಸ್ತಾನು ಕೊಠಡಿಗೆ ಭೇಟಿ ನೀಡಿ, ಕೊಠಡಿಯಲ್ಲಿ ಬೆಳಕು ಇಲ್ಲದಿರುವುದನ್ನು ಕಂಡು ಕನಿಷ್ಠ ಒಂದು ಬಲ್ಪ್ ಹಾಕಿಸಲು ನಿಮಗೆ ಆಗುತ್ತಿಲ್ಲವೇ ಎಂದು ಕೇಳಿದರಲ್ಲದೇ, ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಿದರು.
ಕಟ್ಟಡ ಹಳೆಯದಾಗಿದ್ದು ಮಳೆಗಾಲದಲ್ಲಿ ಸೋರುತ್ತಿದೆ. ವಿದ್ಯುತ್ ಸಮಸ್ಯೆ ಇದೆ ಎಂದು ಸಿಬ್ಬಂದಿಗಳು ಶಾಸಕರ ಗಮನಕ್ಕೆ ತಂದರು.
ಚಿಗಟೇರಿ ವ್ಯಾಪ್ತಿಯ ಓಬಳಾಪುರ ಗ್ರಾಮದ 50 ಕುರಿಗಾಹಿಗಳಿಗೆ ಔಷಧಿ ಇಲ್ಲವೆಂದು ಹೇಳಲಾಗಿದೆ. ಹುಲಿಕಟ್ಟಿ ಸೇರಿದಂತೆ ಇತರೆ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರು, ಕುರಿಗಳಿಗೆ ಸರಿಯಾದ ಚಿಕಿತ್ಸೆ, ಔಷಧಿ ಸಿಗುತ್ತಿಲ್ಲ ಏಕೆ ಎಂದು ಪ್ರಭಾರಿ ವೈದ್ಯೆ ಶ್ರೀದೇವಿಯವರಿಗೆ ಪ್ರಶ್ನಿಸಿದ ಶಾಸಕರು ಕೂಡಲೇ ಸೋಮವಾರದೊಳಗೆ ಔಷಧಿಯನ್ನು ನೀಡಬೇಕು ಎಂದು ಸೂಚಿಸಿದರು.
ಉಪನೋಂದಣಿ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಇದ್ದು, ಕೆಲಸ ಮಾಡದೆ ವಿಳಂಬ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರಿಂದ ದೂರು ಬಂದಿದ್ದು, ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು, ಉಪನೋಂದಣಿ ಕಚೇರಿ ಇರುವ ಕಟ್ಟಡ ಹಳೆಯದಾಗಿದೆ. ಸ್ಥಳಾವಕಾಶದ ಕೊರತೆ ಇದೆ. ಸಮಸ್ಯೆ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚೆ ಮಾಡುವುದಾಗಿ ಶಾಸಕ ಕರುಣಾಕರ ರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಎಸ್.ಟಿ. ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಆರ್.ಲೋಕೇಶ್, ತಾಲ್ಲೂಕು ಎಸ್.ಸಿ.. ಮೋರ್ಚಾ ಉಪಾಧ್ಯಕ್ಷ ಭಂಗಿ ಚಂದ್ರಪ್ಪ, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಮೆಹಬೂಬ ಸಾಬ್, ಗೋಣಿಬಸಪ್ಪ, ರವಿಕುಮಾರ, ಎ.ಪಿ. ನಾಗರಾಜ, ಸಂತೋಷ್ ಇನ್ನಿತರರಿದ್ದರು.