ಜಗಳೂರು : ಬಿಜೆಪಿಯ ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಕರೆ
ಜಗಳೂರು, ಡಿ.5- ಗ್ರಾಮಮಟ್ಟದಿಂದ ಸಂಘಟನೆ ಬಲಪಡಿಸಿ ಬಿಜೆಪಿ ಪಕ್ಷವನ್ನು ಸದೃಢಗೊಳಿಸಬೇಕು ಎಂದು ಸಂಸದ ಜಿಎಂ ಸಿದ್ದೇಶ್ವರ ಕರೆ ನೀಡಿದರು.
ತಾಲ್ಲೂಕಿನ ಕಣ್ಣಕುಪ್ಪೆ ಗವಿಮಠದ ಸಭಾಂಗಣದಲ್ಲಿ ಪಕ್ಷದಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಅಭ್ಯಾಸ ವರ್ಗ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾ ರಂಭದಲ್ಲಿ ಅವರು ಮಾತನಾಡಿದರು. ಮೇಲ್ಮಟ್ಟದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಮಧ್ಯಭಾಗದವರೆಗೂ ಪಕ್ಷ ಸಂಘಟನೆ ವಿಸ್ತರಿಸಿ ಅಧಿಕಾರ ಪಡೆದಿದ್ದೇವೆ ಎಂದರು.
ರಾಜ್ಯದಲ್ಲಿ ಬಿಜೆಪಿ ಪಕ್ಷ ಎರಡನೇ ಬಾರಿ ಅಧಿಕಾರಕ್ಕೆ ಬಂದು ಆಡಳಿತ ನಡೆಸುತ್ತಿದ್ದರೂ ಕೂಡ ಸಂಪೂರ್ಣ ಬಹುಮತ ಗಳಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷ ತಳಮಟ್ಟದಿಂದ ಬಲವರ್ಧನೆಗೊಳ್ಳಬೇಕಿದೆ ಎಂದರು.
ಇದುವರೆಗೂ ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಆಡಳಿತದಲ್ಲಿ ಕೆಲವೆಡೆ ಕಾಂಗ್ರೆಸ್ ಪಾಲಾಗಿವೆ, ಕಾಂಗ್ರೆಸ್ ಬೆಂಬಲಿತವಾಗಿವೆ ಅನ್ನುವುದು ಸತ್ಯ ಸಂಗತಿಯಾಗಿದೆ. ಹೀಗಾಗಿ ಅಧಿಕಾರ ಬಹಳ ಕಡೆ ನಮ್ಮ ವಶದಲ್ಲಿಲ್ಲ. ಈ ದೆಸೆಯಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಎಲ್ಲೆಡೆ ವಿಸ್ತರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ವರಿಷ್ಠರ ಸಮ್ಮುಖದಲ್ಲಿ ಪಕ್ಷ ತೀರ್ಮಾನಿಸಿದ್ದು 8 ಕ್ಷೇತ್ರ, 9 ಮಂಡಲದ ಗ್ರಾಮೀಣ ಭಾಗಗಳಲ್ಲಿ ಯುವ ಜನರನ್ನು ತಲುಪಿ, ಪಕ್ಷ ಸಂಘಟನೆ ಬಲಗೊಳಿಸಲು ಪ್ರಶಿಕ್ಷಣ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಕ್ಷೇತ್ರದ ಅಭಿವೃದ್ದಿ ನನ್ನ ಕನಸಾಗಿದೆ. ಕೆರೆಗಳಿಗೆ ನೀರು ಬರುವ ಪೂರ್ವ ಯೋಜಿತವಾಗಿ ಗ್ರಾಮಗಳಲ್ಲಿನ ಕೆರೆಗಳಲ್ಲಿ ಹೂಳೆತ್ತಿ ಸ್ವಚ್ಛಗೊಳಿಸಲಾಗಿತ್ತು. ಇದೀಗ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ನೀರು ಬರಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಜಿಲ್ಲಾ ಉಪಾಧ್ಯಕ್ಷ ಡಿ.ವಿ. ನಾಗಪ್ಪ ,ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಜಿ.ಪಂ. ಸದಸ್ಯರಾದ ಎಸ್ ಕೆ ಮಂಜುನಾಥ್, ಯರಬಳ್ಳಿ ಸಿದ್ದಪ್ಪ, ಜಿಪಂ ಮಾಜಿ ಸದಸ್ಯ ಸೊಕ್ಕೆ ನಾಗರಾಜ್, ತಾಪಂ ಸದಸ್ಯ ಸಿದ್ದೇಶ್, ಪಪಂ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಎಸ್.ಟಿ. ಮೋ ರ್ಚಾದ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.