ಅತ್ಯಾಚಾರ, ಕೊಲೆ ಆರೋಪಿಗಳ ಬಂಧನಕ್ಕೆ ಎಐಎಸ್‍ಎಫ್ ಆಗ್ರಹ

ಜಗಳೂರು, ಡಿ.5- ಬಂಜಾರ ಸಮುದಾಯದ ಅಪ್ರಾಪ್ತ ಬಾಲಕಿ ಆರತಿಬಾಯಿಯ ಮೇಲೆ ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆ ಮಾಡಿರುವವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಎಐಎಸ್‍ಎಫ್ ತಾಲ್ಲೂಕು ಅಧ್ಯಕ್ಷ ಯುವರಾಜು ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೊಲೆ ಮಾಡಿರುವವರನ್ನು ಕೂಡಲೇ ಬಂಧಿಸಬೇಕು ಎಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಹೊಟ್ಟೆಪಾಡಿಗಾಗಿ ದುಡಿಯಲು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ತಾಳೆಬಸಾಪುರ ತಾಂಡಾದ ವರು ದೂರದ ಮಂಡ್ಯ ಜಿಲ್ಲೆಗೆ ಕುಟುಂಬದವರ ಜೊತೆ ವಲಸೆ ಹೋಗಿದ್ದ ಸಂದರ್ಭದಲ್ಲಿ ಆರತಿಬಾಯಿಯ ಮೇಲೆ ಅತ್ಯಾಚಾರ ಮಾಡಿ ಕೊಲೆಮಾಡಿದ್ದು ಇಂತಹ ಹೇಯ ಕೃತ್ಯಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದರು. ಅತ್ಯಾಚಾರವೆಸಗಿ ಬರ್ಬರ ಕೊಲೆ ಮಾಡಿರುವವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ತಕ್ಷಣ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಪ್ರಾರಂಭಿಸಬೇಕು. ಮೃತ ಆರತಿಬಾಯಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ವಲಸೆ ಸಮುದಾಯಕ್ಕೆ ಸೂಕ್ತ ರಕ್ಷಣೆ ಹಾಗೂ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ  ಕಾರ್ಯದರ್ಶಿ ಮಂಜು ಐಹೊಳೆ, ಸದಸ್ಯರಾದ ಆಂಜನೇಯ, ಮೇಘ, ಜ್ಯೋತಿ, ಮನೋಜ್, ಗೌತಮ್, ಸಚಿನ್ ಹಾಜರಿದ್ದರು.

error: Content is protected !!