ಹರಿಹರದ ಕಾಂಗ್ರೆಸ್ ಸಭೆಯಲ್ಲಿ ಶಾಸಕ ಎಸ್. ರಾಮಪ್ಪ ಕರೆ
ಹರಿಹರ, ಡಿ.5- ಕಳೆದ ಜಿ.ಪಂ, ತಾ.ಪಂ, ಗ್ರಾ.ಪಂ ಚುನಾವಣೆಯಲ್ಲಿ ಪಕ್ಷದಲ್ಲಿ ಭಿನ್ನಾಭಿ ಪ್ರಾಯ ಮೂಡಿದ್ದರಿಂದ ಅತಿ ಹೆಚ್ಚಿನ ಪ್ರಮಾಣ ದಲ್ಲಿ ಗೆಲುವು ಕಾಣಲಿಕ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ, ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮವಹಿಸಿ, ದುಡಿದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವಂತೆ ಮಾಡಬೇಕು ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.
ನಗರದ ಎಸ್.ಎಸ್.ಕೆ ಕಲ್ಯಾಣ ಮಂಟಪದ ಆವರಣದಲ್ಲಿ ಇಂದು ನಡೆದ ಗ್ರಾಮ ಪಂಚಾಯತಿ ಚುನಾವಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು, ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಲು ಪಕ್ಷದ ಮುಖಂಡರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುತ್ತದೆ. ಆ ಮುಖಂ ಡರೂ ಸಹ ಅಷ್ಟೇ ನಿಷ್ಠೆಯಿಂದ ಕಾರ್ಯವನ್ನು ಮಾಡಿ ಪಕ್ಷದ ಅಭ್ಯರ್ಥಿ ಗಳು ಹೆಚ್ಚಿನ ಪ್ರಮಾ ಣದಲ್ಲಿ ಗೆಲ್ಲುವಂತೆ ಮಾಡುವು ದಕ್ಕೆ ಶ್ರಮವಹಿಸಿ ಕೆಲಸವನ್ನು ಮಾಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಶ್ರಮವಹಿಸಿ ಮತ್ತು ಭಿನ್ನಾಭಿಪ್ರಾಯಗಳನ್ನು ಮರೆತು ಕೆಲಸ ಮಾಡಿದಾಗ ಎಲ್ಲಾ ಗ್ರಾಮ ಪಂಚಾಯತಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಹೇಳಿದಂತೆ ನಾನು ಕೆಲಸವನ್ನು ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಕೆಲವು ಅನುದಾನ ಬಿಡುಗಡೆ ಮಾಡಿದ್ದು ಈಗ ಸ್ಥಗಿತಗೊಳಿಸಲಾಯಿತು. ಹಾಗೆಯೇ ಆಗಿದ್ದರಿಂದ ಅಭಿವೃದ್ಧಿ ಕುಂಠಿತವಾಯಿತು. ಮಾಜಿ ಶಾಸಕ ಹರೀಶ್ ಅವರೂ ಸಹ ಅನೇಕ ಕೆಲಸಗಳಿಗೆ ಕಡ್ಡಿ ಮಾಡಿದರ ಪರಿಣಾಮವಾಗಿ ಕೊಮಾರನಹಳ್ಳಿ ಕೆರೆ ಅಭಿವೃದ್ಧಿ, ಭೈರನಪಾದ ನೀರಿನ ಯೋಜನೆ 52 ಕೋಟಿ, ಭಾನುವಳ್ಳಿ, ಯಕ್ಕೆಗೊಂದಿ 17 ಕೋಟಿ ಹಾಗೂ ಸಾರಥಿ, ಪಾಮನೇಹಳ್ಳಿ 13 ಕೋಟಿ ರೂ. ರಸ್ತೆ ಮತ್ತು ನಗರದಲ್ಲಿ ರಾಜಕಾಲುವೆ ಮೇಲೆ ಮಳಿಗೆ ನಿರ್ಮಾಣ ಸೇರಿದಂತೆ, ಹಲವಾರು ಅಭಿವೃದ್ಧಿ ಕೆಲಸಗಳಿಗೆ ಕುಂಠಿತವಾಯಿತು. ಆದರೂ ಸಹ ನಾನು ಹಿಂದೆ ಬಿದ್ದಿಲ್ಲ. ಈ ಬೆಳವಣಿಗೆಗೆ ನಾನು ಇನ್ನು ಮುಂದೆ ಬೇರೆ ರೀತಿಯಲ್ಲಿ ನಡೆದುಕೊಳ್ಳಲು ಮುಂದಾಗುವುದಾಗಿ ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ರೇವಣಸಿದ್ದಪ್ಪ ಮಾತನಾಡಿ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲುವುದು ಮುಂದೆ ನಡೆಯುವ ಚುನಾವಣೆಯಲ್ಲಿ ಗೆಲ್ಲಲು ಪಕ್ಷಕ್ಕೆ ಭದ್ರಬುನಾದಿ ಹಾಕಿದಂತೆ ಆಗುತ್ತದೆ ಎಂದು ಹೇಳಿದರು.
ಎಪಿಎಂಸಿ ಸದಸ್ಯ ಮಂಜುನಾಥ್ ಕೊಮಾರನ ಹಳ್ಳಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗುಂಪಿನಿಂದ ಸುಮಾರು 109 ಸದಸ್ಯರು ಆಯ್ಕೆಯಾದರು. ಆದರೆ, ಅವರು ಹಣ ಮತ್ತು ಕಾಮಗಾರಿ ಆಸೆಯಿಂದ ಬೇರೆ ಪಕ್ಷಕ್ಕೆ ವಲಸೆ ಹೋಗಿದ್ದರಿಂದ 56 ಕಾಂಗ್ರೆಸ್ ಸದಸ್ಯರು ಮಾತ್ರ ಉಳಿಯುವ ಪ್ರಸಂಗಗಳು ಬಂದಿದೆ. ಇದರಿಂದಾಗಿ ಪಕ್ಷಕ್ಕೆ ಅನೇಕ ಕಡೆಗಳಲ್ಲಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಹಿನ್ನಡೆ ಆಯಿತು ಎಂದು ಹೇಳಿದರು.
ಮಾಜಿ ಜಿ.ಪಂ ಸದಸ್ಯ ನಾಗೇಂದ್ರಪ್ಪ ಮಾತನಾಡಿ, ಏಷ್ಯ ಖಂಡದಲ್ಲೇ ಭಾರತ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನಕ್ಕೆ ಬಿಜೆಪಿ ಸರ್ಕಾರ ತಂದು ನಿಲ್ಲಿಸಿದೆ. ಅಂತಹ ಭ್ರಷ್ಟ ಸರ್ಕಾರವನ್ನು ಹೋಗಲಾಡಿಸಬೇಕು ಅಂದರೆ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಅದಕ್ಕೆ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಶ್ರಮವಹಿಸಿ ದುಡಿಯಬೇಕು ಮತ್ತು ನಾಯಕರೂ ಸಹ ಮುಖಂಡರಿಗೆ ಹೆಚ್ಚಿನ ಜವಾಬ್ದಾರಿ ವಹಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕಬೇಕು ಎಂದರು.
ಈ ವೇಳೆ ಡಿ.ಬಸವರಾಜ್, ಚಮನ್ ಸಾಬ್, ಭಾನುವಳ್ಳಿ ಭೀಮಪ್ಪ, ಪರಮೇಶ್ವರಪ್ಪ ಹಿಂಡಸಗಟ್ಟ, ಏಕಾಂತಪ್ಪ, ಕುಂಬಳೂರು ವೀರುಪಾಕ್ಷಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಬೆಳ್ಳೂಡಿ ಬಸವರಾಜ್, ಕೆ.ಜಡಿಯಪ್ಪ, ಎಲ್.ಬಿ.ಹನುಮಂತಪ್ಪ, ಅಭಿದಾಲಿ, ಜಿಗಳಿ ಆನಂದಪ್ಪ, ಬೆಣ್ಣೆಹಳ್ಳಿ ಹಾಲೇಶಪ್ಪ, ಕನ್ನಪ್ಪ ಭಾನುವಳ್ಳಿ, ಬಾಲರಾಜ್, ಕೊಂಡಜ್ಜಿ ಹೊನ್ನಪ್ಪ, ಅರ್ಜನಾಯ್ಕ್, ನಗರಸಭೆ ಸದಸ್ಯ ಎಂ.ಎಸ್.ಬಾಬುಲಾಲ್, ವಸಂತ್, ಶಾಸಕರ ಆಪ್ತ ಸಹಾಯಕ ವಿಜಯ್ ಮಾಲತೇಶ್ ಇತರರು ಹಾಜರಿದ್ದರು.