ಕರವೇ ಸ್ವಾಭಿಮಾನಿ ಬಣದಿಂದ ಮಲೇಬೆನ್ನೂರಿನಲ್ಲಿ ರಾಜ್ಯೋತ್ಸವ

ಮಲೇಬೆನ್ನೂರು, ಡಿ.5- ಕರ್ಣಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇವರ ವತಿಯಿಂದ ಭಾನುವಾರ ಮಲೇಬೆನ್ನೂರು ಮಹಿಳಾ ಘಟಕವನ್ನು ಉದ್ಘಾಟಿಸಿ, ಇಲ್ಲಿನ ನೀರಾವರಿ ಇಲಾಖೆ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಪರ ಹೋರಾಟಗಾರ ಸಾಬೀರ್ ಜಯಸಿಂಹ ಅವರು, ಕನ್ನಡ ಭಾಷೆ ಸುಮಾರು ಎರಡು ನೂರು ವರ್ಷಗಳ ಇತಿಹಾಸ ಹೊಂದಿರುವ ಭಾಷೆಯಾಗಿದ್ದು, ವಿಶ್ವ ಲಿಪಿಗಳ ರಾಣಿ ನಮ್ಮ ನುಡಿ, ಇಂತಹ ಭಾಷೆ ನೆಲ ಜಲ ಸಂರಕ್ಷಣೆಗಾಗಿ ಇವತ್ತು ಮಲೇಬೆನ್ನೂರು ಪಟ್ಟಣದಲ್ಲಿ ಮಹಿಳಾ ಘಟಕ ಸ್ಥಾಪನೆ ಆಗಿರುವುದು ಬಹಳ ಸಂತೋಷದ ವಿಚಾರ ಎಂದು ಹೇಳಿದರು. 

ಪಿಎಸ್ಐ ವೀರಬಸಪ್ಪ ಮಾತನಾಡಿ, ಮಹಿಳೆಯರು ವಾಟ್ಸಾಪ್, ಫೇಸ್‌ಬುಕ್‌ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಭಾವಚಿತ್ರಗಳನ್ನು ಹಾಕು ವಾಗ ಯೋಚಿಸಿ ಹಾಕಿ ಎಂದು ಎಚ್ಚರಿಸಿದರು. ಮಹಿಳೆ ಯರು ತಮ್ಮ ಬ್ಯಾಂಕ್ ದಾಖಲೆಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ತಿಳಿಸಬಾರದು.   ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿನ ಅಪರಾಧ ಕೃತ್ಯಗಳಿಗೆ ಮಹಿಳೆಯರೇ ಹೆಚ್ಚು ಬಲಿಪಶುಗಳಾಗುತ್ತಿದ್ದಾರೆ. ಈ ಕಾರಣದಿಂದ ಮಹಿಳೆಯರು ಜಾಗೃತರಾಗಬೇಕೆಂದರು. 

ರಾಜ್ಯ ಮಹಿಳಾ ಘಟಕದ ಸಂಚಾಲಕರಾದ ಸುವರ್ಣಮ್ಮ ಅವರು, ಸಂಘಟನೆಯ ಉದ್ದೇಶಗಳನ್ನು ವಿವರಿಸಿದರು. ಪುರಸಭೆ ಅಧ್ಯಕ್ಷೆ ನಹೀದಾ ಅಂಜುಂ, ಹಾಲಿವಾಣದ ಎಸ್.ಜಿ.ಪರಮೇಶ್ವರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷರಾದ ಚೌಡಮ್ಮ, ಜಿಲ್ಲಾ ಕಾರ್ಯದರ್ಶಿ ಅಂಬಿಕಾ, ಪುರಸಭೆ ಸದಸ್ಯ ಭಾನುವಳ್ಳಿ ಸುರೇಶ್, ಕುಂಬಳೂರು ಸದಾಶಿವ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!