ದಾವಣಗೆರೆ, ಡಿ.3- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸ ಬೇಕೆಂದು ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ರೈತ, ಕೃಷಿ ಕಾರ್ಮಿಕ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಕಾರ್ಯಕರ್ತರು ನಗರದಲ್ಲಿ ಇಂದು ಅಖಿಲ ಭಾರತ ರೈತರ ಐಕ್ಯತಾ ದಿನವನ್ನಾಗಿ ಆಚರಿಸಿದರು.
ಜಯದೇವ ವೃತ್ತದಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಆರ್‍ಕೆಎಸ್ ರಾಜ್ಯಾಧ್ಯಕ್ಷ ಡಾ. ಟಿ.ಎಸ್. ಸುನೀತ್ ಕುಮಾರ್, ದೇಶದ ಕಾರ್ಪೊರೇಟ್ ಮನೆತನಗಳ ಮಹದಾಸೆಯಂತೆ ಕೇಂದ್ರ ಸರ್ಕಾರ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ರೈತರಿಗೆ ಮರಣ ಶಾಸನ ಬರೆದಿದೆ. ಕೊರೊನಾ ನಿಯಂತ್ರಣ ಕ್ರಮವಾಗಿ ಘೋಷಣೆಯಾಗಿದ್ದ ಲಾಕ್‍ಡೌನ್ ಸಮಯ ದುರುಪಯೋಗ ಪಡಿಸಿಕೊಂಡು, ಕೇಂದ್ರ ಸರ್ಕಾರ ರೈತರಿಗೆ ಮತ್ತು ದುಡಿಯುವ ವರ್ಗದ ಜನರಿಗೆ ಮಹಾದ್ರೋಹ ಮಾಡುವ ಮೂಲಕ ಬಂಡವಾಳ ಶಾಹಿಗಳ ಪರವಾದ ನೀತಿಗಳನ್ನು ಜಾರಿ ಮಾಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ್, ಆರ್‍ಕೆಎಸ್ ಸಹ ಸಂಚಾಲಕ ಟಿವಿಎಸ್ ರಾಜು, ಕೈದಾಳೆ ಮಂಜು ನಾಥ್, ತಿಪ್ಪೇಸ್ವಾಮಿ ಅಣಬೇರು, ಭಾರತಿ, ಪರಶು ರಾಮ್, ನಾಗಜ್ಯೋತಿ, ರೈತ ಸಂಘದ ಭೀಮಪ್ಪ, ಗುಮ್ಮ ನೂರು ಭೀಮೇಶ್, ಶಿವಪುರ ಕೃಷ್ಣಮೂರ್ತಿ, ಕಾಡಜ್ಜಿ ಪ್ರಕಾಶ್, ಕೆಂಚಮ್ಮನಹಳ್ಳಿ ಹನುಮಂತ, ಹೂವಿನಮಡು ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.