ದಾವಣಗೆರೆ, ಡಿ.2- ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ತಾಲ್ಲೂಕಿನ ಐಗೂರು-ಗೊಲ್ಲರಹಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಹೆದ್ದಾರಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಇಟ್ಟು ರಸ್ತೆ ತಡೆ ನಡೆಸಿದ ರೈತ ಸಂಘದ ಕಾರ್ಯಕರ್ತರು, ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ದೌರ್ಜನ್ಯ ನಡೆಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಅನ್ನದಾತನನ್ನು ಬೀದಿಗೆ ತಳ್ಳುವ ಭೂ ಸುಧಾರಣಾ ಕಾಯಿದೆ ತಿದ್ದುಪಡಿಯಿಂದ ರೈತರಿಗೆ ಭೂಮಿಯನ್ನು ಕೊಂಡುಕೊಳ್ಳುವ ಹಕ್ಕನ್ನು ಇಲ್ಲದಂತೆ ಮಾಡಿ, ಕೃಷಿ ಜಮೀನನ್ನು ಹಣವುಳ್ಳ ಶ್ರೀಮಂತರು ಮತ್ತು ಕಪ್ಪು ಹಣವುಳ್ಳವರು, ಖದೀಮರು 594 ಎಕರೆಗಳವರೆಗೆ ಕೊಂಡುಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಆಹಾರದ ಕೃತಕ ಅಭಾವವನ್ನು ಸೃಷ್ಟಿಸಿ ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಹೊನ್ನೂರು ಮುನಿಯಪ್ಪ, ಚಿನ್ನಸಮುದ್ರ ಶೇಖರ್ ನಾಯ್ಕ ಸೇರಿದಂತೆ ಹಲವರು ಭಾಗವಹಿಸಿದ್ದರು.