ದಾವಣಗೆರೆಯಲ್ಲಿ ಕ್ರಿಕೆಟ್ ಹಬ್ಬಕ್ಕೆ ತೆರೆ
ದಾವಣಗೆರೆ, ಡಿ. 2- ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ಅವರ ಸವಿನೆನಪಿನ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ವಾರ ನಾಲ್ಕು ದಿನಗಳ ಕಾಲ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಹಾಗೂ ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ 13ನೇ ವರ್ಷದ ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ 2020 ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಟೆನ್ನಿಸ್‍ಬಾಲ್ (ಲೀಗ್ ಕಂ ನಾಕೌಟ್) ಕ್ರಿಕೆಟ್ ಟೂರ್ನಿಗೆ ನಿನ್ನೆ ತೆರೆ ಬಿದ್ದಿತು.
ನಿನ್ನೆ ಬೆಳಗಿನ ಜಾವದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಫ್ರೆಂಡ್ಸ್ ಮಧ್ಯೆ ನಡೆದ ಹಣಾಹಣಿಯಲ್ಲಿ ಬೆಂಗಳೂರಿನ ಫ್ರೆಂಡ್ಸ್ ವಿಜಯ ದಾಖಲಿಸುವ ಮೂಲಕ ಪ್ರಥಮ ಸ್ಥಾನ ಪಡೆಯಿತು ಈ ಮೂಲಕ ಪ್ರಥಮ ಸ್ಥಾನ 3.55 ಲಕ್ಷ ರೂ. ಹಾಗೂ ಶಾಮನೂರು ಡೈಮಂಡ್ ಕಪ್ಪನ್ನು ಹ್ಯಾಟ್ರಿಕ್ಸ್ ಪ್ರಶಸ್ತಿ ಪಡೆದಿದ್ದ ದಾವಣಗೆರೆ ಜನಪ್ರಿಯ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು 2.25 ಲಕ್ಷ ರೂ. ಹಾಗೂ ಶಿವಗಂಗಾ ಕಪ್ ಹಾಗೂ ತೃತೀಯ ಸ್ಥಾನವನ್ನು ಪಡೆದ ಮುಂಬೈ ತಂಡ 1.25 ಲಕ್ಷ ರೂ ನಗದು ಬಹುಮಾನ ಪಡೆಯಿತು.
ಬಹುಮಾನ ವಿತರಣೆ ಸಮಾರಂಭದಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಉಪಾಧ್ಯಕ್ಷ ಶಿವಗಂಗಾ ಶ್ರೀನಿವಾಸ್, ಮಹಾದೇವ್ ಸಿ.ಹಂಪನೂರು, ಪ್ರಧಾನ ಕಾರ್ಯದರ್ಶಿ ಕುರುಡಿ ಗಿರೀಶ್ (ಸ್ವಾಮಿ), ಖಜಾಂಚಿ ಜಯಪ್ರಕಾಶ್ ಗೌಡ ಮತ್ತಿತರರಿದ್ದರು.
ಈ ಟೂರ್ನಿ ಯಲ್ಲಿ ಕೋವಿಡ್ ಕಾರಣದಿಂದ ಹೊರ ರಾಜ್ಯದ ಕೇರಳ, ಚೆನ್ನೈ, ಗೋವಾ, ಮಹಾರಾಷ್ಟ್ರ ಹಾಗೂ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ, ಸೇರಿದಂತೆ, 36 ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿತ್ತು.