ನೇರ ಕೂರಿಗೆ ಭತ್ತ ಬಿತ್ತನೆ ಮಳೆಯಾಶ್ರಿತ ಪ್ರದೇಶಕ್ಕೆ ಸೂಕ್ತ

ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್‌

ದಾವಣಗೆರೆ, ನ.27- ಭತ್ತ ನಮ್ಮ ರಾಜ್ಯದ ಪ್ರಮುಖ ಆಹಾರ ಬೆಳೆ. ಭತ್ತ ಬೆಳೆಯಬೇಕೆಂದರೆ ಹೆಚ್ಚು ನೀರು ಇರಬೇಕು ಎನ್ನುವುದು ಬಹಳ ರೈತರ ಅಭಿಪ್ರಾಯ. ಭತ್ತವನ್ನು ವಿವಿಧ ಪದ್ಧತಿಗಳಲ್ಲಿ ಬೆಳೆಯಬಹುದು. ಅವುಗಳು ಸಾಮಾನ್ಯ ನಾಟಿ ಪದ್ಧತಿ, ಯಾಂತ್ರೀಕೃತ ನಾಟಿ ಹಾಗೂ ನೇರ ಕೂರಿಗೆಯಿಂದ ಬಿತ್ತನೆ ಮಾಡಬಹುದು ಎಂದು  ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್‌ ಅವರು ಪ್ರತಿಪಾದಿಸಿದರು.

ದಾವಣಗೆರೆ ತಾಲ್ಲೂಕಿನ ಹಾಲುವರ್ತಿ ಗ್ರಾಮದಲ್ಲಿ ಮೆಕ್ಕೆಜೋಳಕ್ಕೆ ಪರ್ಯಾಯ ಬೆಳೆಯಾಗಿ ಯಾವುದಾದರೂ ಒಂದು ಬೆಳೆಯನ್ನು ಬೆಳೆಯಬೇಕೆಂದು ಪ್ರಗತಿಪರ ರೈತ ದ್ಯಾಮಣ್ಣನವರು ಆಲೋಚನೆ ಮಾಡುತ್ತಿದ್ದರು. ಕಾರಣ ಕಳೆದ 2-3 ವರ್ಷಗಳಿಂದ ಮೆಕ್ಕೆಜೋಳದಲ್ಲಿ ಸೈನಿಕ ಹುಳು ವಿನ ಅಥವಾ ಲದ್ದಿ ಹುಳುವಿನ ಬಾಧೆ ಹೆಚ್ಚಾಗಿರುವುದರಿಂದ ಮೆಕ್ಕೆಜೋಳದಲ್ಲಿ ಇಳುವರಿಯೂ ಗಣನೀಯವಾಗಿ ಕಡಿಮೆಯಾಗಿದೆ. ಈ ಕಾರಣದಿಂದ ದ್ಯಾಮಣ್ಣ ಅವರು ಐಸಿಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ, ಸೂಕ್ತ ತಂತ್ರಜ್ಞಾನವನ್ನು ಮಳೆಯಾಶ್ರಿತ ಪ್ರದೇಶಕ್ಕೆ ಪಡೆದುಕೊಂಡರು. ಮಳೆಯಾಶ್ರಿತ ಪ್ರದೇಶವಾದ ಹಾಲುವರ್ತಿ ಗ್ರಾಮದಲ್ಲಿ 1 ಎಕರೆ ಪ್ರದೇಶದಲ್ಲಿ ಭತ್ತವನ್ನು ನೇರ ಕೂರಿಗೆ ಬಿತ್ತನೆ ಪದ್ಧತಿಯಲ್ಲಿ ಬಿತ್ತನೆ ಮಾಡಲಾಯಿತು. ಒಂದು ಎಕರೆ ಪ್ರದೇಶಕ್ಕೆ 12 ಕೆಜಿ ಬೀಜವನ್ನು ಹಾಗೂ ಬಿತ್ತನೆ ಸಮಯದಲ್ಲಿ ಜೈವಿಕ ಗೊಬ್ಬರಗಳನ್ನು ಬೀಜೋಪಚಾರ ಮಾಡಿ, ಬಿತ್ತನೆ ಮಾಡುವುದರಿಂದ ಸಾರಜನಕ ಗೊಬ್ಬರವನ್ನು ಶೇ.10-15 ಪರ್ಸೆಂಟ್ ಕಡಿಮೆ ಮಾಡಬಹುದು  ಎಂದು ಅವರು ತಿಳಿಸಿದ್ದಾರೆ.

ಮೆಕ್ಕೆಜೋಳಕ್ಕೆ ಪರ್ಯಾಯವಾಗಿ ಭತ್ತವನ್ನು ಕಡಿಮೆ ಖರ್ಚಿನಲ್ಲಿ ಬೆಳೆಯುತ್ತೇನೆ ಹಾಗೂ ಒಂದು ಎಕರೆ ಪ್ರದೇಶದಿಂದ 18 ಕ್ವಿಂಟಾಲ್ ಇಳುವರಿಯನ್ನು ಪಡೆಯುವುದರ ಜೊತೆಗೆ ಉತ್ತಮವಾದ ಮೇವನ್ನು ಪಡೆದಿರುತ್ತೇನೆ  ಎಂದು  ರೈತ ದ್ಯಾಮಣ್ಣ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 

ಬೇಸಿಗೆಯಲ್ಲಿ ಪ್ರತಿವರ್ಷ ಮೇವಿನ ಕೊರತೆಯಿಂದ ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿತ್ತು. ಆದರೆ, ಈ ವರ್ಷ ನಾನೇ ಬೆಳೆದ ಭತ್ತದ ಮೇವು ಇರುವುದರಿಂದ ಹಾಲಿನ ಉತ್ಪಾದನೆ ಕಡಿಮೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. 

ಬೇಸಾಯ ತಜ್ಞರಾದ ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ ಪ್ರಥಮ ಬಾರಿಗೆ ಭತ್ತವನ್ನು ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದಿದ್ದೇನೆ ಹಾಗೂ ಮೆಕ್ಕೆಜೋಳಕ್ಕೆ ಹೋಲಿಸಿದರೆ, ಈ ಬೆಳೆಯು ನನಗೆ ಎರಡು ಪಟ್ಟು ಆದಾಯ ನೀಡಿದೆ ಎಂದು ದ್ಯಾಮಣ್ಣ ಹರ್ಷ ವ್ಯಕ್ತಪಡಿಸಿದ್ದಾರೆ.

error: Content is protected !!