ಕೃಷಿಯಲ್ಲಿ ರಾಸಾಯನಿಕಗಳನ್ನು ಕಡಿಮೆ ಮಾಡದಿದ್ದರೆ ರೈತರು ಕರಾಳ ದಿನ ಅನುಭವಿಸಬೇಕಾದೀತು

ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಸ್.ಬಿ. ರಾಜಶೇಖರಪ್ಪ ಎಚ್ಚರಿಕೆ

ದಾವಣಗೆರೆ, ನ.27- ನಗರದ ಕೃಷಿ ಇಲಾಖೆ ವತಿಯಿಂದ ಎಲೆಬೇತೂರು ಗ್ರಾಮದ ಪ್ರಗತಿಪರ ರೈತರಾದ ಹೆಚ್.ಸಿ.ಲೋಕೇಶ್ ಅವರ ಜಮೀನಿನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ತೊಗರಿ ಬೆಳೆ ಕ್ಷೇತ್ರೋತ್ಸವವನ್ನು ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ತಾಲ್ಲೂಕು ಪಂಚಾಯಿತಿ ಸದಸ್ಯ ಸಂಗಪ್ಪ ಗೌಡ್ರು ನೆರವೇರಿಸಿ  ಮಾತನಾಡಿ, ನಮ್ಮ ಗ್ರಾಮದಲ್ಲಿ ರೈತರು ರಾಗಿ, ಜೋಳ, ತೊಗರಿ ಮತ್ತು ವಾಣಿಜ್ಯ ಬೆಳೆಗಳನ್ನು ಪ್ರೀತಿಯಿಂದ ಶ್ರದ್ಧೆ ವಹಿಸಿ ವ್ಯವಸಾಯ ಮಾಡುತ್ತಾರೆ ಎಂದು ಶ್ಲ್ಯಾಘಿಸಿದರು. 

ಹೆಚ್.ಸಿ. ಲೋಕೇಶ್‍ ಅವರು  `ಲತಿಕ’ ತಳಿಯ ತೊಗರಿ ಬೆಳೆಯನ್ನು ಇಲಾಖೆಯ ಮಾರ್ಗದರ್ಶನದಲ್ಲಿ ಉತ್ತಮವಾಗಿ ಬೆಳೆದಿದ್ದಾರೆ. ಇದೇ ರೀತಿ ಪ್ರತಿಯೊಬ್ಬರೂ ಇಲಾಖೆಯ ಮಾರ್ಗದರ್ಶನದಲ್ಲಿ ಉತ್ತಮ ತಾಂತ್ರಿಕತೆ ಗಳನ್ನು ಅಳವಡಿಸಿ, ಹೆಚ್ಚಿನ ಉತ್ಪಾದನೆ ಮಾಡಬೇಕು. ಆ ಮೂಲಕ ಇತರೆ ರೈತರಿಗೆ ಮಾದರಿಯಾಗಬೇಕು ಎಂದು ಅವರು ಕರೆ ನೀಡಿದರು.

ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ರಾಜಶೇಖರಪ್ಪ ಮಾತನಾಡಿ, ಕೃಷಿಯಲ್ಲಿ ಯಥೇಚ್ಛವಾಗಿ ಬಳಸುತ್ತಿರುವ ರಾಸಾಯನಿಕಗಳನ್ನು ಕಡಿಮೆ ಮಾಡದೇ ಇದ್ದರೆ, ಪ್ರತಿಯೊಬ್ಬರೂ ಕರಾಳ ದಿನಗಳನ್ನು ಅನುಭವಿಸಬೇಕಾಗುತ್ತದೆ. ಎಷ್ಟೇ ಉತ್ಪಾದನೆ ಮಾಡಿದರೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.  

ಉಪ ಕೃಷಿ ನಿರ್ದೇಶಕ ಶಿವಕುಮಾರ್‍ ಮಾತನಾಡಿ, ಪ್ರತಿಯೊಬ್ಬ ರೈತರು ಸಹಜ ಕೃಷಿ, ಸಾವಯವ ಕೃಷಿ, ಸಮಗ್ರ ಬೇಸಾಯ ಪದ್ಧತಿ ಗಳು, ಸಮಗ್ರ ಕೀಟ ನಿರ್ವಹಣಾ ಕಾರ್ಯಕ್ರಮ ಗಳನ್ನು, ಸಮಗ್ರ ಪೋಷಕಾಂಶ ನಿರ್ವಹಣೆಯಂ ತಹ ಎಲ್ಲಾ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಕೃಷಿ ಮಾಡಿದ್ದೇ ಆದಲ್ಲಿ ಕೃಷಿಯಲ್ಲಿ ನಷ್ಟ ಖಂಡಿ ತವಾಗಿಯೂ ಇರುವುದಿಲ್ಲ ಎಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಹೆಚ್.ಕೆ.ರೇವಣಸಿದ್ದನಗೌಡ ಮಾತನಾಡಿ, ಮಣ್ಣು ಆರೋಗ್ಯ ಅಭಿಯಾನ, ಕೃಷಿ ಯಾಂತ್ರೀಕರಣ, ಕೃಷಿ ಸಂಸ್ಕರಣೆಗೆ ಸಂಬಂಧಿಸಿದ ಮಾಹಿತಿ, ಇಂದಿನ ಆಹಾರ ಪದ್ಧತಿಗಳು, ಸಾವಯವ ಕೃಷಿ ಸೇರಿದಂತೆ ಇಲಾಖೆಯಲ್ಲಿ ಇರುವ ಎಲ್ಲಾ ಯೋ ಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

ಬೇತೂರು ಗ್ರಾ.ಪಂ. ಅಧ್ಯಕ್ಷ ಹೆಚ್.ಮಂಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಕಾಡಾ ಸದಸ್ಯ ಹೆಚ್.ಬಸವರಾ ಜಪ್ಪ, ಕೃಷಿ ಅಧಿಕಾರಿ ಲಾವಣ್ಯ, ಸಹಾಯಕ ಕೃಷಿ ಅಧಿಕಾರಿ ಬಿ.ದುರುಗಪ್ಪ, ಆತ್ಮ ಸಿಬ್ಬಂದಿ ವೆಂಕ ಟೇಶ್, ಅನುವುಗಾರರಾದ ರಾಜಪ್ಪ, ಪ್ರಭಾಕರ್  ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!