ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಲೋಕಿಕೆರೆ ನಾಗರಾಜ್
ಮಾಯಕೊಂಡ, ನ. 27 – ‘ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಗಳು ರೈತ ಪರವಾಗಿದ್ದು, ಬಿಜೆಪಿಯಿಂದ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಲೋಕಿಕೆರೆ ನಾಗರಾಜ್ ತಿಳಿಸಿದರು.
ಸಮೀಪದ ಆನಗೋಡಿನಲ್ಲಿ ಬಿಜೆಪಿ ಆಯೋಜಿಸಿದ್ದ ರೈತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆ ಬಗ್ಗೆ ಪ್ರಬಲ ಕಾರಣವಿಲ್ಲದಿದ್ದರೂ ವಿಪಕ್ಷಗಳು ಅಪಪ್ರಚಾರ ನಡೆಸಿವೆ. ಕಾಯ್ದೆಯಿಂದ ರೈತರ ಮೇಲೆ ಎಪಿಎಂಸಿಯ ಸೆಸ್ ಬೀಳುವುದು ತಪ್ಪಿದೆ. ಕಂಪನಿ ಮತ್ತು ರೈತರ ಮಧ್ಯ ಸೌಹಾರ್ದ ಒಪ್ಪಂದವಿದ್ದರೆ ಮಾತ್ರ ಕಾಂಟ್ರ್ಯಾಕ್ಟ್ ಫಾರ್ಮಿಂಗ್ನಲ್ಲಿ ಬೆಳೆಯಲಾಗುತ್ತದೆ.
ಕಾಯ್ದೆಯಿಂದ ರೈತರಿಗೆ ಮೋಸವಾಗುವುದು ತಪ್ಪಿ, ಅನುಕೂಲವಾಗಿದೆ. ಹೈನುಗಾರಿಕೆ, ಮೀನುಗಾರಿಕೆಯಂತಹ ಕೃಷಿ ಆಧಾರಿತ ಉದ್ದಿಮೆಗಳಿಗೆ ಅವಕಾಶ ಕಲ್ಪಿಸಲು ಭೂಮಿ ಬೇಕೆ ಬೇಕು. ಬಹುಪಯೋಗಿ ಕಾಯ್ದೆ ತಂದ ಪ್ರಧಾನಿ ಮತ್ತು ಮುಖ್ಯಮಂತ್ರಿಗೆ ರೈತರು ಅಭಿನಂದನಾ ಪತ್ರ ಬರೆಯಲಿದ್ದಾರೆ ಎಂದರು.
ಶಾಸಕ ಪ್ರೊ. ಲಿಂಗಣ್ಣ ಮಾತನಾಡಿ, ಎಪಿಎಂಸಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆಗಳಿಂದ ರೈತರಿಗೆ ಅನುಕೂಲವಿದ್ದರೂ ವಿಪಕ್ಷಗಳು ವಿನಾಕಾರಣ ತಪ್ಪು ಭಾವನೆ ಮೂಡಿಸುತ್ತಿವೆ. ಜನರ ಆತಂಕಕ್ಕೆ ಉತ್ತರ ನೀಡಲು ಬಿಜೆಪಿ ಮುಂದಾಗಿದೆ. ರೈತ ಮೋರ್ಚಾ ಪಕ್ಷದ ಪ್ರಮುಖ ಅಂಗವಾಗಿದ್ದು ಜವಾಬ್ದಾರಿ, ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಬಿಜೆಪಿ ಕಾರ್ಯಕರ್ತರು ಕಾಯ್ದೆ ಬಗ್ಗೆ ಮೊದಲು ಅರಿವು ಹೊಂದಿ, ರೈತರಿಗೆ ಮಾಹಿತಿ ನೀಡಬೇಕು. ಶೇ 80 ರಷ್ಟು ರೈತರು ಬೆಳೆ ಸಮೀಕ್ಷಾ ಆಪ್ ಬಳಸಿದ್ದಾರೆ. ಕಾಯಿದೆಯಿಂದ ರೈತರು ರಾಜ್ಯಗಳ ಗಡಿ ದಾಟಿ ಮಾರಲು ಇದ್ದ ಸಮಸ್ಯೆ ನೀಗಲಾಗಿದೆ. ಭೂ ಸುಧಾರಣಾ ಕಾಯ್ದೆಯಡಿ ಹೆಚ್ಚೆಂದರೆ 118 ಎಕರೆ ಖರೀದಿಗೆ ಮಾತ್ರ ಅವಕಾಶವಿದೆ. ದೇವರಾಜ ಅರಸು ಅವಧಿಯಲ್ಲಿ ಭೂ ಖರೀದಿಗೆ ಆದಾಯದ ಮಿತಿ ರೂ. 2 ಲಕ್ಷ ಇದ್ದುದನ್ನು ರೂ. 20 ಲಕ್ಷಕ್ಕೆ ಏರಿಸಿದ್ದು ಸಿದ್ದರಾಮಯ್ಯ ಸರ್ಕಾರ. ಉಪ ಚುನಾವಣೆಯಲ್ಲಿ ಜನ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಿದರೂ, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಮಾಯಕೊಂಡ ರೈತ ಮೋರ್ಚಾ ಅಧ್ಯಕ್ಷ ಗೋಪನಾಳ್ ಅಶೋಕ್, ಅಣಜಿ ಗುಡ್ಡೇಶ್ ಮಾತನಾಡಿದರು.
ರೈತ ಮೋರ್ಚಾ ಕಾರ್ಯದರ್ಶಿ ಮಹೇಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯ ಆಲೂರು ನಿಂಗರಾಜ್, ಪದಾಧಿಕಾರಿಗಳಾದ ಅಣಜಿ ಗುಡ್ಡೇಶ್, ಮುಖಂಡರಾದ ಮಹಾಬಲೇಶ್ವರ, ಕರಿಲಕ್ಕೇನಹಳ್ಳಿ ಓಂಕಾರಪ್ಪ, ಗುಮ್ಮನೂರು ಮುರುಗೇಶ್, ಪರಶುರಾಂಪುರ ಮರುಳುಸಿದ್ದಪ್ಪ, ಮಂಜಾನಾಯ್ಕ, ಅಣಬೇರು ಶಿವಪ್ರಕಾಶ್, ಗುಮ್ಮನೂರು ನಟರಾಜ್, ವಸಂತಕುಮಾರ್ ಇದ್ದರು.