ಹರಪನಹಳ್ಳಿ ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ
ಹರಪನಹಳ್ಳಿ, ನ. 27- ಮಹಾಮಾರಿ ಕೊರೊನಾ ವೈರಸ್ನಿಂದ ಇಡೀ ವಿಶ್ವವೇ ಕಂಗಾಲಾಗಿದ್ದರೂ ಕೂಡ, ಜನರಲ್ಲಿ ದೈವಭಕ್ತಿ ಕಡಿಮೆಯಾಗಿಲ್ಲ ಎಂದು ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯರು ಹೇಳಿದರು.
ಅವರು, ಪಟ್ಟಣದ ವಾಲ್ಮೀಕಿ ನಗರದ ದೊಡ್ಡಗರಡಿಕೇರಿಯ ಜರ್ಮಲಿ ದುರುಗಮ್ಮ ದೇವಿಯ ಕಳಸಾರೋಹಣ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ದೈವಭಕ್ತಿಗೆ ಹೆಸರುವಾಸಿಯಾದ ವಾಲ್ಮೀಕಿ ನಾಯಕ ಸಮಾಜ, ಇಂದು ಸಂಘಟನೆಯತ್ತ ಸಾಗಿದ್ದು, ಸಂಘಟನೆಯ ಜೊತೆಗೆ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು. ದೇವಸ್ಥಾನ ನಿರ್ಮಾಣದ ಜೊತೆಗೆ ನಿತ್ಯ ಪೂಜೆ, ಸ್ವಚ್ಛತೆ ಕಾಪಾಡಿಕೊಳ್ಳಿ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಭಾರತವನ್ನಷ್ಟೇ ಅಲ್ಲದೇ, ಇಡೀ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕಾಣಿಸಿಕೊಂಡು, ಲೆಕ್ಕವಿಲ್ಲದಷ್ಟು ಜನರು ಸಾವಿಗೀಡಾಗಿದ್ದಾರೆ.
ಕೊರೊನಾ ವೈರಸ್ನ ಪ್ರಮಾಣ ಕಡಿಮೆಯಾಗಿದ್ದರೂ ಕೂಡ ಚಳಿಗಾಲ ಆರಂಭವಾಗಿದ್ದು, ರೋಗದ ಪ್ರಮಾಣ ದ್ವಿಗುಣವಾಗುವ ಸಂಭವ ಜಾಸ್ತಿ ಇದ್ದು, ಜನಸಾಮಾನ್ಯರು ವ್ಯಾಕ್ಸಿನ್ ಬರುವವರೆಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯವಂತರಾಗಿರಿ ಎಂದರು.
ವಾಲ್ಮೀಕಿ ನಗರದ ಶ್ರೀ ಸಣ್ಣ ಹಾಲಸ್ವಾಮೀಜಿ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜ ಪರಿಶ್ರಮದಿಂದ ದುಡಿಯುವ ಜನಾಂಗವಾಗಿದ್ದು, ನೀವು ದೇವಸ್ಥಾನಗಳ ನಿರ್ಮಾಣಕ್ಕಿಂತ ಶೈಕ್ಷಣಿಕ ಸಂಸ್ಥೆಗಳನ್ನು ತೆರೆದರೆ ನಿಮ್ಮ ಬಾಳು ಹಸನಾಗುತ್ತದೆ ಎಂದರು.
ಕೂಲಹಳ್ಳಿಯ ಶ್ರೀ ಚಿನ್ಮಯ ಸ್ವಾಮೀಜಿ ಮಾತನಾಡಿ, ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಕೂಡ ಸಂಪ್ರದಾಯ, ದೈವಭಕ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವೈರಸ್ನ ಭಯವಿಲ್ಲದೆ ಜನರು ಹೊಲಗಳಲ್ಲಿ ದುಡಿದು ಜೀವನ ಸಾಗಿಸುತ್ತಿದ್ದಾರೆ ಎಂದರು.
ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿ ಶೆಟ್ಟಿ ಉಚ್ಚೆಂಗೆಪ್ಪ, ಪುರಸಭೆ ಉಪಾಧ್ಯಕ್ಷರಾದ ನಿಟ್ಟೂರು ಭೀಮವ್ವ, ಪುರಸಭೆ ಸದಸ್ಯರುಗಳಾದ ಟಿ. ವೆಂಕಟೇಶ, ಎಂ.ವಿ. ಅಂಜಿನಪ್ಪ, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಪುರಸಭೆ ಮಾಜಿ ಸದಸ್ಯ ಎಂ. ದುರುಗಪ್ಪ, ಮುಖಂಡರಾದ ಬಾಣದ ಅಂಜಿನಪ್ಪ, ರಾಯದುರ್ಗದ ದುರುಗಪ್ಪ, ಎಂ. ಉಚ್ಚೆಂಗೆಪ್ಪ, ಮ್ಯಾಕಿ ದುರುಗಪ್ಪ, ನಿಟ್ಟೂರು ದೊಡ್ಡ ಹಾಲಪ್ಪ, ಕೆ. ಅಂಜಿನಪ್ಪ, ಕಮ್ಮಾರ ಹಾಲಪ್ಪ, ಚಿನ್ನುಡಿಗಿ ನಾಗರಾಜ, ಗಿಡ್ಡಳ್ಳಿ ಬಸವರಾಜ, ಮ್ಯಾಕಿ ಸಣ್ಣ ಹಾಲಪ್ಪ ಸೇರಿದಂತೆ, ಮತ್ತಿತರರು ಉಪಸ್ಥಿತರಿದ್ದರು.