ಜಗಳೂರು, ನ.24 – ವಿವಿಧತೆಯಲ್ಲಿ ಏಕತೆ ಇರುವ ಹಾಗೂ ಹಲವು ಧರ್ಮ, ಭಾಷೆಗಳನ್ನೊಳಗೊಂಡ ಭಾರತ ದೇಶದಲ್ಲಿನ ಸೌಹರ್ದಯುತ ಬದುಕೇ ಶ್ರೇಷ್ಠ ಎಂದು ಜೆಎಂಎಫ್‍ಸಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಜೆ.ತಿಮ್ಮಯ್ಯ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿನ ಸಾಮರ್ಥ್ಯ ಸೌಧದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಇಂದು ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಏಕತಾ ದಿನಾಚರಣೆ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಸಂವಿಧಾನದಡಿ ಪ್ರಜಾಪ್ರಭುತ್ವದ ಆಶಯದಂತೆ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ವೈವಿಧ್ಯತೆಯಲ್ಲಿ ಏಕತೆಯನ್ನು ಹೇಗೆ ಏಕೆ ಕಾಣಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟು ನಾವೆಲ್ಲಾ ಒಂದು ಎಂಬ ಭಾವನೆ ಸಾರುವ ಉದ್ದೇಶದಿಂದ ರಾಷ್ಟ್ರೀಯ ಏಕತಾ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಗುಡಿಸಿಲಿನಿಂದ ಅರಮನೆಯವರೆಗೆ ವಾಸವಿರುವ ಪ್ರತಿಯೊಬ್ಬ ಮಹಿಳೆಗೂ ಸಮಾನ ಅವಕಾಶ ಹಾಗೂ ಸಂವಿಧಾನ ಬದ್ದ ಹಕ್ಕುಗಳನ್ನೊಳಗೊಂಡಿರುವ ಕಾನೂನು ಲಭ್ಯವಾಗಬೇಕು. ಸಮಾಜದಲ್ಲಿ ಗೌರವಯುತ ಜೀವನ ಸಾಗಿಸಬೇಕು. ಆಗ ಮಾತ್ರ ರಾಷ್ಟ್ರೀಯ ಏಕತೆಗೆ ಅರ್ಥ ಸಿಗುತ್ತದೆ ಎಂದರು.
ಭಾರತದ ಭಾಷೆ, ನೆಲ, ಜಲ, ಸಂಸ್ಕೃತಿಯ ಸೊಬಗು, ವೈವಿಧ್ಯಮಯ ಕಲೆಗಳಿಂದ ಕೂಡಿದ ಜನಸಮೂಹದ ಸಾಂಪ್ರದಾಯಿಕ ಜೀವನ ಶೈಲಿ ಅವಿಸ್ಮರಣೀಯ ಎಂದರು.
ತಹಶೀಲ್ದಾರ್ ಡಾ.ನಾಗವೇಣಿ ಮಾತನಾಡಿ, ಪ್ರತಿಭಾವಂತ ಮಹಿಳೆಗೆ ಸೂಕ್ತ ಸ್ಥಾನಮಾನ ದೊರೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು.ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದನ್ನು, ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಗೈದು ಸಾಬೀತು ಪಡಿಸಬೇಕು ಎಂದರು.
ಸಿಡಿಪಿಓ ಲೊಕೇಶ್ ಮಾತನಾಡಿ,ರಾಜಕೀಯ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರೂ ಮಹಿಳೆಗೆ ಸಮಾನ ಅಧಿಕಾರ ವಿಸ್ತರಣೆಯಾಗದೆ ಕುಟುಂಬಸ್ಥರ ನಿಯಂತ್ರಣದಲ್ಲಿರುವುದು ಕೊನೆಗಾಣಬೇಕು
ಸಮಾರಂಭದಲ್ಲಿ ತಾಪಂ ಇ.ಓ. ಮಲ್ಲಾನಾಯ್ಕ, ವಕೀಲರ ಸಂಘದ ಅಧ್ಯಕ್ಷ ಬಸವರಾಜ್ ಸಂಘದ ಪದಾಧಿಕಾರಿಗಳಾದ ವೈ.ಹನುಮಂತಪ್ಪ, ಕರಿಬಸಯ್ಯ ತಿಪ್ಪೇಸ್ವಾಮಿ, ರುದ್ರೇಶ್, ಆರ್ ಓಬಳೇಶ್, ಬಸವರಾಜ್, ಮೇಲ್ವಿಚಾರಕರಾದ ಶಶಿಕಲಾ, ಶಾಂತಮ್ಮ, ಗೌರಮ್ಮ ಮತ್ತಿತರರು ಉಪಸ್ಥಿತರಿದ್ದರು.