ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ವಿದ್ಯಾರ್ಥಿಗಳ ಶೈಕ್ಷಣಿಕ ಪೂರಕ ಚಟುವಟಿಕೆ ಸಹಕಾರಿಯಾಗಲಿವೆ
– ಕೆ. ಹನುಮಕ್ಕ
ಹರಪನಹಳ್ಳಿ, ನ.24 – ಸಾಂಕ್ರಾಮಿಕ ರೋಗ ಕೊರೊನಾ ಎಲ್ಲೆಡೆ ಹರಡುತ್ತಿರುವುದರಿಂದ ಮಕ್ಕಳ ಶಿಕ್ಷಣ ಕುಂಠಿತವಾಗದಂತೆ ಇಲಾಖೆಯಿಂದ ಮಕ್ಕಳಿಗೆ ಓದುವ ಹವ್ಯಾಸವನ್ನು ರೂಢಿಸುವುದಕ್ಕೆ ಅವರ ಓದಿಗೆ ಪುಸ್ತಕ ನೀಡಬೇಕಾಗಿದೆ ಎಂದು ಬಳ್ಳಾರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಮತ್ತು ಉಪನಿರ್ದೇಶಕ (ಅಭಿವೃದ್ಧಿ) ಕೆ. ಹನುಮಕ್ಕ ಹೇಳಿದರು.
ತಾಲ್ಲೂಕಿನ ಗುಂಡಗತ್ತಿ ಗ್ರಾಮದಲ್ಲಿ ಗ್ರಾಮ ಪಂಚಾ ಯಿತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ಹಾಗೂ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಕ್ಕಳಿಗೆ ಪುಸ್ತಕ ನೀಡುವ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲನೇ ವಾರದಲ್ಲಿ ಓದುವ ಬೆಳಕು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇದೇ ದಿನಾಂಕ 14ರಿಂದ ಜ.14ರವರೆಗೆ 10 ವಾರಗಳ ಕಾಲ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನದೊಂದಿಗೆ ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಗ್ರಂಥಾ ಲಯ ಸದ್ಬಳಕೆ ಮಾಡಿಕೊಂಡು ಓದುವ ಬೆಳಕು ಕಾರ್ಯಕ್ರಮ ಹಮ್ಮಿಕೊಂಡು ಗ್ರಂಥಾಲಯಕ್ಕೆ ನೋಂ ದಣಿ ಮಾಡಿಕೊಳ್ಳಬೇಕು, ಪುಸ್ತಕ ವಿತರಣೆ ಮಾಡಿ ಓದಿ ದ್ದನ್ನು ದಾಖಲಿಸುವಂತಾಗಬೇಕು, ಸ್ಪರ್ಧೆ ಏರ್ಪಡಿಸಬೇಕು, ಸಂವಿಧಾನದ ಬಗ್ಗೆ ಪರಿಚಯ ನೀಡಬೇಕು ಎಂದರು.
ಎರಡನೇ ವಾರದಿಂದ ಮಕ್ಕಳ ಆರೋಗ್ಯ, ಪೌಷ್ಠಿಕತೆ, ರೋಗ, ರಕ್ಷಣೆ ಬಗ್ಗೆ ಜಾಗೃತಿ, ಮಕ್ಕಳ ಸಮಸ್ಯೆಗಳ ಬಗ್ಗೆ ಅರಿವಿನ ಪೋಸ್ಟರ್ ತಯಾರಿ ಚಟುವಟಿಕೆಯನ್ನು ನೀಡಬೇಕು, ಮಕ್ಕಳ ಗ್ರಾಮ ಸಭೆ ಮೂಲಕ ಅವರ ಸಮಸ್ಯೆಗಳನ್ನು ದೂರು ಪೆಟ್ಟಿಗೆಯಲ್ಲಿ ಹಾಕಿ, ಅವುಗಳ ಪರಿಹಾರಕ್ಕೆ ಕ್ರಮವಹಿಸುವ ಮುಖಾಂತರ ಮಕ್ಕಳ ಶೈಕ್ಷಣಿಕ ಪೂರಕ ಚಟುವಟಿಕೆಗೆ ಸಹಕಾರಿಯಾಗಲಿವೆ ಎಂದು ಹೇಳಿದರು.
ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಜಯರಾಜ್ ಎಲ್.ಆರ್ ಮಾತನಾಡಿ, ಮಕ್ಕಳು ಶೈಕ್ಷಣಿಕ ವ್ಯವಸ್ಥೆಯಿಂದ ದೂರವಾಗುತ್ತಿರುವುದನ್ನು ಮನಗಂಡು ಸರ್ಕಾರ ವಿದ್ಯಾಗಮದಂತೆ 10 ವಾರಗಳ ಕಾಲ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ಹಾಗೂ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿರಂತರವಾಗಿ ಮಕ್ಕಳ ಸಂಪರ್ಕದಲ್ಲಿದ್ದು, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಬುನಾದಿಯನ್ನು ಗಟ್ಟಿಗೊಳಿಸಲು ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.
ಬಳ್ಳಾರಿ ಡಯಟ್ ಉಪನ್ಯಾಸಕ ಅಂಬಣ್ಣ, ವಲಯ ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ, ಕಬೀರನಾಯ್ಕ. ಸಮೂಹ ಸಂಪನ್ಮೂಲ ವ್ಯಕ್ತಿ ಐ.ಕೊಟ್ರೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಚ್.ಎಂ. ಹುಲಿಬಂಡೆ, ವಲಯ ಶಿಕ್ಷಣ ಸಂಯೋಜಕ ಕಬೀರನಾಯ್ಕ, ಗ್ರಾಮ ಪಂಚಾಯಿತಿ ಪಿಡಿಓ ವೀರೇಶ್, ಮುಖ್ಯೋಪಾಧ್ಯಾಯ ಎಸ್. ಎಂ. ಚಿದಾನಂದಸ್ವಾಮಿ, ಎಚ್.ನಾಗರಾಜ್, ಬಿ.ಆರ್.ಪಿ. ಎಚ್.ಅಣ್ಣಪ್ಪ, ನಾಗರಾಜ್ ಶಿಕ್ಷಕರಾದ ಕೆ.ಸಿದ್ದಪ್ಪ. ಶಿವಶಂಕರ್, ಪ್ರಭಾಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.