ದಾವಣಗೆರೆ, ನ. 24- ಚದುರಂಗ ಸ್ಪರ್ಧೆಯು ಒಂದು ಬುದ್ಧಿವಂತಿಕೆಯ ಆಟ. ಈ ಆಟವನ್ನು ಅಳವಡಿಸಿಕೊಂಡರೆ ವಿದ್ಯಾಭ್ಯಾಸಕ್ಕೆ ಮತ್ತು ಬುದ್ಧಿವಂತಿಕೆ, ಬುದ್ಧಿಶಕ್ತಿಗೂ ಸಹಾಯವಾಗುತ್ತದೆ ಎಂದು ದಾವಣಗೆರೆ ಜಿಲ್ಲಾ ಚೆಸ್ ಕ್ಲಬ್ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.
ನಗರದ ಜಿಲ್ಲಾ ಚೆಸ್ ಕ್ಲಬ್ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಪರ್ಧಾಳುಗಳ ಪೋಷಕರು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹಿಸಬೇಕು. ಮಕ್ಕಳು ಕ್ರೀಡಾ ಚಟುವಟಿಕೆಗಳನ್ನು ಆಸಕ್ತಿಯಿಂದ ಕಲಿತು, ಬುದ್ಧಿವಂತರಾಗಿ ಮುಂದಿನ ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಬೇಕು. ಜೀವನದಲ್ಲಿ ಏಳುಬೀಳುಗಳನ್ನು ಅರಿಯಲು ಚದುರಂಗದಾಟ ಸಹಕಾರಿ ಎಂದು ಅವರು ತಿಳಿಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ನಗರ ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್, ಬುದ್ಧಿವಂತಿಕೆಯ ಗುಣಮಟ್ಟ ಹೆಚ್ಚಿಸಿಕೊಳ್ಳಲು ಚದುರಂಗ ಸ್ಪರ್ಧೆ ಉತ್ತಮ ಸಹಕಾರಿ. ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲವಾಗಲಿದೆ ಎಂದರು.
ಪಂದ್ಯಾವಳಿಯಲ್ಲಿ ಒಟ್ಟು 6 ಸುತ್ತುಗಳು ನಡೆದಿದ್ದು, ಹನ್ನೆರಡು ವರ್ಷದ ಒಳಗಿನ ವಿಭಾಗದಲ್ಲಿ ದಿಗಂತ್ ಎಂ.ಎಸ್. ಅವರು ಅಭಿನವ್ ವಿರುದ್ಧ ಜಯ ಗಳಿಸಿ ಪ್ರಥಮ ಸ್ಥಾನ ಪಡೆದು ಕನ್ನಡ ರಾಜ್ಯೋತ್ಸವ ಕಪ್ ಗಳಿಸಿದ್ದಾರೆ.
ದ್ವಿತೀಯ ಸ್ಥಾನ ನಿಶ್ಚಲ್ ಜಿ.ಎಸ್., ಮೂರನೇ ಸ್ಥಾನ ತನ್ನೈಜ, ನಾಲ್ಕನೇ ಸ್ಥಾನ ಅಭಿನವ್, ಐದನೇ ಸ್ಥಾನ ಜೀವನ್ ಎಂ.ಎಸ್. ಪಡೆದಿದ್ದಾರೆ.
ಹದಿನೆಂಟು ವರ್ಷದ ಒಳಗಿನ ವಿಭಾಗದಲ್ಲಿ ಭಾನುತೇಜ್ ವಿರುದ್ಧ ಧನುಷ್ ಎಂ.ಎಸ್. ವಿಜೇತರಾಗಿದ್ದು, ರಾಜ್ಯೋತ್ಸವ ಕಪ್ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಮಿಥುನ್ ಎಂ. ದ್ವಿತೀಯ, ಭಾನುತೇಜ್ ಸಿ.ಎಂ.
ಮೂರನೇ ಸ್ಥಾನ, ವರದ್ ಎಂ ಕುಬಸದ್ ನಾಲ್ಕನ್ ಸ್ಥಾನ, ಐದನೇ ಸ್ಥಾನ ಗೌರೀಶ್ ಹೆಚ್.ಜಿ. ಪಡೆದಿದ್ದಾರೆ.
ಸಮಾರಂಭದಲ್ಲಿ ಯುವರಾಜ್, ಮಂಜುಳಾ ಯುವರಾಜ್, ಗಂಗಾಧರ್, ಪಂದ್ಯಾವಳಿಯ ತೀರ್ಪುಗಾರರಾದ ಚಿತ್ರದುರ್ಗದ ನವೀನ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.