ಮರಾಠ ಒಂದು ಭಾಷೆ, ಕನ್ನಡವೂ ಒಂದು ಭಾಷೆ. ಅಭಿವೃದ್ಧಿ ಮಾಡುವುದಾದರೆ ಕಷ್ಟದಲ್ಲಿದ್ದವರನ್ನು ಅಭಿವೃದ್ಧಿಸಲಿ.
– ಪ್ರವೀಣ್ ಕುಮಾರ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ
ದಾವಣಗೆರೆ, ನ.21- ರಾಜ್ಯದಲ್ಲಿರುವ ರೈತ ಸಂಘಟನೆ, ದಲಿತ ಸಂಘಟನೆ, ಕನ್ನಡ ಪರ ಸಂಘಟನೆಗಳೆಲ್ಲಾ ಒಟ್ಟಾಗಿ ಒಂದು ಶಕ್ತಿಯಾಗಿ ರೂಪುಗೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಯುವ ಘಟಕದ ವತಿಯಿಂದ ನಗರದ ಶ್ರೀ ಶಿವಯೋಗ ಮಂದಿರದಲ್ಲಿ ಇಂದು ಸಂಜೆ ಹಮ್ಮಿಕೊಳ್ಳಲಾಗಿದ್ದ 65ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ, ಕನ್ನಡ ಹಬ್ಬ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡಿಗರಲ್ಲಿ ಶಕ್ತಿ ಇದೆ, ಆದರೆ ಸಂಘಟನೆ ಇಲ್ಲ. ಸ್ವಾರ್ಥ ಹೆಚ್ಚಾಗಿ, ಒಂದು ರೀತಿಯಲ್ಲಿ ಕಾಲು ಏಳೆಯುವ ಏಡಿಗಳಂತಾಗಿ ಬಿಟ್ಟಿದ್ದೇವೆ. ಈ ಕಾರಣಕ್ಕಾಗಿಯೇ ಕನ್ನಡ ವಿರೋಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ನಾವು ಕನ್ನಡ ವಿರೋಧಿಗಳನ್ನು ಖಂಡಿತ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಮಾರಾಠ ಒಂದು ಭಾಷೆ, ಕನ್ನಡವೂ ಒಂದು ಭಾಷೆ. ಅಭಿವೃದ್ಧಿ ಮಾಡುವುದಾದರೆ ಕಷ್ಟದಲ್ಲಿದ್ದವರನ್ನು ಅಭಿವೃದ್ಧಿ ಮಾಡಲಿ ಎಂದು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸಿ ಅವರು ಮಾತನಾಡಿದರು.
ಧರ್ಮ, ಜಾತಿ ಒಡೆದು ಎಲ್ಲಾ ಜಾತಿಗೂ ಒಂದೊಂದು ಪ್ರಾಧಿಕಾರ ಕೊಟ್ಟರೆ ಹೇಗೆ? ಎಲ್ಲರೂ ಒಂದೊಂದು ಪ್ರಾಧಿಕಾರಕ್ಕಾಗಿ ಸರದಿಯಲ್ಲಿ ನಿಂತಿದ್ದಾರೆ. ಅವರೆಲ್ಲರಿಗೂ ಪ್ರಾಧಿಕಾರ ನೀಡಿ, ಗೂಟದ ಕಾರು ಕೊಡುವುದಾದರೆ ಸಚಿವ ಸಂಪುಟವೇಕೆ? ಎಂದು ಪ್ರವೀಣ್ ಶೆಟ್ಟಿ ಪ್ರಶ್ನಿಸಿದರು.
ಮಾರಾಟ ಪ್ರಾಧಿಕಾರ ವಿರೋಧಿಸಿ ನಡೆಸುವ ಹೋರಾಟ ನಿಂತಿಲ್ಲ. ನಮ್ಮ ಸಂಘಟನೆ ಪಾರದರ್ಷಕವಾಗಿದ್ದು, ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳೊಂದಿಗೆ ಇದೇ 30 ರಂದು ಸಭೆ ನಡೆಸಿ ತೀರ್ಮಾನಿಸುತ್ತೇವೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಿಂದ ಇಲ್ಲಿಯವರೆಗೆ ಬಂದ್ ಮಾಡಿಕೊಂಡೇ ಇದ್ದ ಜನತೆಗೆ ಕನ್ನಡಕ್ಕಾಗಿ ಒಂದು ದಿನ ಬಂದ್ ಮಾಡಿದರೆ ಏನೂ ನಷ್ಟವಾಗದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಕಲಾವಿದರನ್ನು ಪ್ರೋತ್ಸಾಹಿಸಿದರೆ ಮಾತ್ರ ಕಲೆ ಉಳಿಯಲು ಸಾಧ್ಯ. ಕರ್ನಾಟಕ ರಾಜ್ಯೋತ್ಸವದಂತಹ ಕಾರ್ಯಕ್ರಮಗಳಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಪ್ರಶಂಸನಾರ್ಹ ಎಂದು ಹೇಳಿದರು.
ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕರ್ನಾಟಕ ಏಕೀಕರಣದ ನಂತರ ಮೈಸೂರು ರಾಜ್ಯ ಉದಯವಾಯಿತು. ನಂತರ ಕರ್ನಾಟಕ ಎಂಬ ಹೆಸರಿನೊಂದಿಗೆ ಬದಲಾಯಿತು. ಇತ್ತೀಚಿನ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಎಂಬ ಬಳಕೆ ಹೆಚ್ಚಾಗಿದ್ದು, ಇದರ ಬದಲಾಗಿ ಕರ್ನಾಟಕ ರಾಜ್ಯೋತ್ಸವ ಎಂದು ಬಳಸುವುದೇ ಉತ್ತಮ ಎಂದು ಶ್ರೀಗಳು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಉಪನ್ಯಾಸಕ ಎ.ಬಿ. ರಾಮಚಂದ್ರಪ್ಪ, ಇತ್ತೀಚಿನ ದಿನಗಳಲ್ಲಿ ಭಾಷಿಕ ಗುಲಾಮಗಿರಿ ಹೆಚ್ಚಾಗಿದೆ. ಆಳುವ ಭಾಷೆಗೆ ಮಾರು ಹೋಗುವ ಸಂದರ್ಭಗಳು ಸೃಷ್ಟಿಯಾಗಿವೆ. ಈ ನಡುವೆ ಇಂಗ್ಲೀಷ್ ಭಾಷೆಯನ್ನು ದಕ್ಕಿಸಿಕೊಂಡು ಕನ್ನಡ ತನ್ನ ಅಸ್ಮಿತೆ ಉಳಿಸಿಕೊಂಡಿದೆ ಎಂದರು.
ಭಾಷೆ ಜಾತ್ಯತೀತ, ಧರ್ಮಾತೀತವಾದದ್ದು. ಒಂದು ಜನಾಂಗಕ್ಕೆ ಸೇರಿದುದಲ್ಲ. ಕನ್ನಡದ ಅಭಿಮಾನ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ವಲಯಗಳಲ್ಲೂ ವಿಸ್ತರಿಸಬೇಕಿದೆ ಎಂದು ಹೇಳಿದರು.
ಕು.ನಮನ ದಾವಣಗೆರೆ ಹಾಗೂ ಕರುನಾಡಿನ ಕುರಿತು ಮಾತನಾಡಿದರು. ಮಿಮಿಕ್ರಿ ಗೋಪಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಸಾಹಿತಿ ಪಾಪುಗೌಡ, ಲೋಕಿಕೆರೆ ನಾಗರಾಜ್, ಶ್ರೀನಿವಾಸ ದಾಸಕರಿಯಪ್ಪ, ಟಾರ್ಗೆಟ್ ಅಸ್ಲಂ, ಲೇಖಕಿ ಸುನಿತಾ ಪ್ರಕಾಶ್, ಕು.ನಮನ, ಪೂಜಾ, ಸೋಮಶೇಖರ್, ನಿಂಗರಾಜ್, ರಮೇಶ್, ನಾಗರಾಜ ಗೌಡ, ಲೋಕೇಶ್, ಮಧು ಕುಂದುವಾಡ ಇತರರು ಉಪಸ್ಥಿತರಿದ್ದರು.