ನಿರೋಗಿಗಳಾಗಬಯಸುವವರ ಮೊದಲ ಆದ್ಯತೆ ಪ್ರಕೃತಿ ಚಿಕಿತ್ಸೆ

ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ವಿಂಧ್ಯ ಗಂಗಾಧರ ವರ್ಮ

ದಾವಣಗೆರೆ, ನ.21-  ಪ್ರಕೃತಿ ಚಿಕಿತ್ಸೆ ಯಿಂದ ಎಲ್ಲಾ ರೀತಿಯ ಕಾಯಿಲೆಗಳನ್ನು ಔಷಧ ರಹಿತವಾಗಿ ಸರಿಪಡಿಸಬಹುದು. ಮಾತ್ರವಲ್ಲದೆ, ನಿರೋಗಿಗಳಾಗ ಬಯಸುವ ಪ್ರತಿಯೊಬ್ಬರೂ ಪ್ರಕೃತಿ ಚಿಕಿತ್ಸಾ ಪದ್ಧತಿ ಯನ್ನು ಮೊದಲ ಆದ್ಯತೆಯನ್ನಾಗಿ ಸ್ವೀಕರಿಸ ಬೇಕೇ ಹೊರತು, ಕೊನೆಯ ಆದ್ಯತೆಯನ್ನಾಗಿ ಅಲ್ಲವೆಂದು ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ವಿಂಧ್ಯ ಗಂಗಾಧರ ವರ್ಮ ಸಲಹೆ ನೀಡಿದರು. 

ನಗರದ ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವತಿಯಿಂದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಕೃತಿ ಚಿಕಿತ್ಸೆ, ನಿಸರ್ಗ ಚಿಕಿತ್ಸೆ, ನಿಸರ್ಗೋಪಚಾರ, ನ್ಯಾಚುರೋಪತಿ, ನೇಚರ್ ಕ್ಯೂರ್ ಹೀಗೆ ಹಲವು ನಾಮಗಳಿಂದ ಕರೆಯಲ್ಪಡುವ ಈ ಚಿಕಿತ್ಸೆಯು ಒಂದು ವೈಜ್ಞಾನಿಕ ಚಿಕಿತ್ಸಾ ಪದ್ಧತಿಯಾಗಿದ್ದು, ಇದು ಕೇವಲ ರೋಗವನ್ನು ಮಾತ್ರ ದೂರ ಮಾಡುವುದಲ್ಲದೆ, ಮನುಷ್ಯನ ಜೀವನ ಶೈಲಿಯನ್ನು ಸರಿ ಮಾಡಿ, ದೇಹದ ರೋಗ ನಿರೋಧಕ ಶಕ್ತಿ ಹಾಗೂ ಚೈತನ್ಯ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ವಿಸರ್ಜನಾಂ ಗಗಳನ್ನು ಉತ್ತೇಜನಗೊಳಿಸಿ ದೇಹದ ಕಲ್ಮಶ ಗಳನ್ನು ಹೊರಹಾಕಿ ಮಾನವನ ಆರೋಗ್ಯ ವನ್ನು ನೈಸರ್ಗಿಕವಾಗಿ ವೃದ್ಧಿಗೊಳಿಸುತ್ತದೆ ಎಂದು ಡಾ. ವಿಂಧ್ಯ ವಿವರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಗಿಲ್ ಕ್ಯಾಪ್ಟನ್ ಶಿವನಗೌಡ ತೆಗ್ಗಿ ಮಾತನಾಡಿ, ಪ್ರಕೃತಿ ಚಿಕಿತ್ಸೆಯು ನಿರೌಷಧ ಚಿಕಿತ್ಸಾ ಪದ್ಧತಿಯಾಗಿದ್ದು, ಪ್ರತಿಯೊಬ್ಬರೂ ಇದನ್ನು ತಮ್ಮ ಜೀವನ ಕ್ರಮವಾಗಿ ಸ್ವೀಕರಿಸುವುದರಿಂದ ಎಲ್ಲಾ ರೀತಿಯ ಕಾಯಿಲೆ ಗಳಿಂದ ಹೊರಬರಬಹುದೆಂದು ತಿಳಿಸಿದರು. 

ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ಶಲ್ಯ ಚಿಕಿತ್ಸಕ, ವೈದ್ಯ ಸುಬ್ರಮಣ್ಯಂ ರಾಜು ಮಾತನಾಡಿ, ನೈಸರ್ಗಿಕ ನಿಯಮಗಳ ಉಲ್ಲಂ ಘನೆ ಎಂಬ ಫಲವತ್ತಾದ ಮಣ್ಣಿನಲ್ಲಿ ನಮ್ಮ ಅಜ್ಞಾನ, ದುರಾಸೆ, ಅತಿಯಾದ ಇಂದ್ರಿಯ ಲೋಲುಪತೆ, ಸ್ವಯಂ ನಿಯಂತ್ರಣವಿಲ್ಲ ದಿರುವಿಕೆ, ಸೋಮಾರಿತನ ಮುಂತಾದ ಬಲ ವಾದ ಬೇರುಗಳನ್ನು ಹೊಂದಿ, ಜೀವಶಕ್ತಿಯು ಕುಂದಿರುವುದು, ರಸ, ರಕ್ತಗಳು ದೂಷಿತ ವಾಗಿರುವುದು, ದೇಹದಲ್ಲಿ ಕಲ್ಮಶ ಹಾಗೂ ವಿಷಗಳು ಶೇಖರಗೊಂಡಿರುವುದು – ಎಂಬ ಕಾಂಡದಿಂದ ಅನೇಕ ರೋಗಗಳೆಂಬ ಕೊಂಬೆ ಗಳು ಹೊರಟಿರುವವು ಎಂದು ತಿಳಿಸಿದರು.

ಕಾಯಿಲೆಗೆ ಸೂಕ್ಷಾಣು (ಕ್ರಿಮಿ, ಬ್ಯಾಕ್ಟಿರಿಯಾ ಅಥವಾ ವೈರಸ್)ವೇ ಮೂಲ ಕಾರಣವಲ್ಲ. ಕ್ರಿಮಿಗಳಿಗೆ ಪೌಷ್ಟಿಕ ಆಹಾರವನ್ನು ಕೊಟ್ಟು ಬೆಳೆಸುವ ಮಣ್ಣು – ರೋಗ ನಿರೋಧಕ ಶಕ್ತಿಯಿಲ್ಲದಿರುವುದು. ಹೆಚ್ಚಿನ ಕಾಯಿಲೆಗಳು ರೋಗ ನಿರೋಧಕ ಶಕ್ತಿಯು ಕುಂಠಿತವಾಗುವುದರಿಂದ ಬರುತ್ತವೆಯೇ ಹೊರತು ಕ್ರಿಮಿಗಳಿಂದಲ್ಲ. ದೇಹದಲ್ಲಿ ಕಲ್ಮಶ (ವಿಷ) ವಸ್ತುಗಳ ಶೇಖರಣೆಯು ರೋಗಕ್ಕೆ ಮುಖ್ಯ ಕಾರಣ. ಇದರಿಂದಾಗಿ ದೇಹದ ರೋಗ ನಿರೋಧಕ ಶಕ್ತಿಯು ಕುಂಠಿತವಾಗುತ್ತದೆ. ಆಗ ದೇಹದ ಅಂಗಾಂಗಗಳ ಕಾರ್ಯಕ್ಷಮತೆ ಕ್ಷೀಣಿಸುವುದು. ಮಲಿನ ಪರಿಸರದಲ್ಲಿ ರೋಗಾಣುಗಳು ವರ್ಧಿಸಿ ದೇಹದ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ. ಶರೀರದಲ್ಲಿ ಕಲ್ಮಶ (ವಿಷ) ಪದಾರ್ಥಗಳ ಶೇಖರಣೆಯನ್ನು ತಡೆಗಟ್ಟುವುದರಿಂದ ರೋಗ ಬಾರದಂತೆ ತಡೆಯಬಹುದು. ಸಂಗ್ರಹವಾದ ಕಲ್ಮಶವನ್ನು ಹೊರಹಾಕಿ ದೇಹವನ್ನು ಶುಚಿಗೊಳಿಸುವುದರಿಂದ ರೋಗ ಗುಣ ಹೊಂದುತ್ತದೆ ಎಂದು ತಿಳಿಸಿದರು.

ಆಸ್ಪತ್ರೆಯ ಪಾರ್ವತಿ ನಾಯಕ್ ಮಾತನಾಡಿ,  ಪ್ರಕೃತಿ ಚಿಕಿತ್ಸೆಗಳು ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಸಯಾಟಿಕ, ಸೈನುಸೈಟಿಸ್, ಮೈಗ್ರೇನ್, ಮೂಳೆ ಮುರಿತ, ನೋವುಗಳು, ಕೀಲು ತಪ್ಪಿರುವುದು, ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಮಲಬದ್ಧತೆ ಯವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ವಿವರಿಸಿದರು.

ಆಸ್ಪತ್ರೆಯ ಮ್ಯಾನೇಜರ್ ಪ್ರಹ್ಲಾದ್ ಕೊಪ್ಪದ್ ಸ್ವಾಗತಿಸಿದರು. ಕು. ರೋಜಾ ವಂದಿಸಿದರು. ಈ ಸಂದರ್ಭದಲ್ಲಿ
ಆಸ್ಪತ್ರೆಯ ಸಿಬ್ಬಂದಿಗಳಾದ ಶೋಭಾ ಮತ್ತು ನಾಗಣ್ಣ ಉಪಸ್ಥಿತರಿದ್ದರು.

error: Content is protected !!