ದಾವಣಗೆರೆ, ನ. 17- ನಮ್ಮ ನಾಡಿನ ಮಾತೃ ಭಾಷೆ ಕನ್ನಡವನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅದಕ್ಕೆ ಮಹತ್ವ ಕೊಡಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಜಾನಪದ ವಿದ್ವಾಂಸರೂ ಆದ ಡಾ. ಎಂ.ಜಿ. ಈಶ್ವರಪ್ಪ ಕಳಕಳಿ ವ್ಯಕ್ತಪಡಿಸಿದರು.
ನಗರದ ಪಿ.ಜೆ. ಬಡಾವಣೆಯ ಬಿಇಎ ಕೇಂ ದ್ರೀಯ ನರ್ಸರಿ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮೊನ್ನೆ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಸಂದರ್ಭದಲ್ಲಿ ತಮ ಗಿತ್ತ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಲಿಕೆಗೆ ಇತಿ-ಮಿತಿ ಇರಬಾರದು. ನಮ್ಮ ಜ್ಞಾನ ಸಂಪಾದನೆ, ವ್ಯವಹಾರಕ್ಕಾಗಿ ಮಾತ್ರ ಇತರೆ ಭಾಷೆಗಳನ್ನು ಕಲಿಯಬೇಕು. ಆದರೆ, ಕನ್ನಡಕ್ಕೆ ಮೊದಲ ಆದ್ಯತೆ ನೀಡುವುದರ ಮೂಲಕ ನಮ್ಮ ನಾಡಿಗೆ ನಮ್ಮ ಋಣ ತೀರಿಸುವಲ್ಲಿ ಅಲ್ಪ ಸೇವೆ ಮಾಡಬೇಕು ಎಂದು ಈಶ್ವರಪ್ಪ ಕೇಳಿಕೊಂಡರು.
ಕನ್ನಡ ಭಾಷೆ ಮತ್ತು ಅದರ ಉಳಿವಿಗಾಗಿ ನಡೆದ ಹಾಗೂ ನಡೆಯುತ್ತಿರುವ ಹೋರಾಟಗಳ ಕುರಿತಂತೆ ಮಾರ್ಮಿಕವಾಗಿ ವಿವರಿಸಿದ ಅವರು, ಆ ಹೋರಾಟದಲ್ಲಿ ತಾವು ಭಾಗಿಯಾಗಿದ್ದನ್ನು ಮೆಲಕು ಹಾಕುತ್ತಾ, ಕನ್ನಡ ಭಾಷೆಯ ಸೇವೆಯನ್ನು ನಾನು ನಿರಂತರವಾಗಿ ಮುಂದುವರೆಸುತ್ತೇನೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರೂ, ಈ ಶಾಲೆಯ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶ್ರೀಮತಿ ಕಿರುವಾಡಿ ಗಿರಿಜಮ್ಮ ಮಾತನಾಡಿ, ಡಾ. ಎಂ.ಜಿ. ಈಶ್ವರಪ್ಪ ಅವರ ವ್ಯಕ್ತಿತ್ವ ಹಾಗೂ ಅವರು ಕನ್ನಡ ಭಾಷೆಗಾಗಿ ಮಾಡಿದ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಜಿ.ಎಸ್. ರವಿ ಮಾತನಾಡಿ, ಶಿಕ್ಷಕ ಅಪಾರ ಜ್ಞಾನ ಹೊಂದಿರಬೇಕು ಎನ್ನುವುದಕ್ಕೆ ಡಾ. ಎಂ.ಜಿ. ಈಶ್ವರಪ್ಪ ಉದಾಹರಣೆ. ಅವರು ಅಧ್ಯಾಪಕರಾಗಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಶಿಕ್ಷಕ ವೃತ್ತಿಯ ಜೊತೆಗೆ ಕನ್ನಡ ಭಾಷೆಯ ಸೇವೆ ಸಲ್ಲಿಸುತ್ತಿರುವುದು ಮಾದರಿ ಎಂದು ಶ್ಲ್ಯಾಘಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಸಲ್ಲಿಸಿದ ಶಿಕ್ಷಕಿ ಶ್ರೀಮತಿ ಕೊಟ್ರಮ್ಮ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಡಿ.ಹೆಚ್. ತಿಪ್ಪೇಸ್ವಾಮಿ ಅವರಿಂದ ಅತಿಥಿಗಳ ಪರಿಚಯ, ಶಿಕ್ಷಕ ಹೆಚ್. ಮಹೇಶ್ ಅವರಿಂದ ವಂದನಾರ್ಪಣೆ ನಡೆಯಿತು.