ದೀಪಾವಳಿ ಹಬ್ಬಕ್ಕೆ ನಾವು ಈಗಲೂ ನಮ್ಮ ಲಂಬಾಣಿ ಸಮುದಾಯದ ಆಚರಣೆಗಳನ್ನು ಪಾಲಿಸುತ್ತಾ ಬಂದಿದ್ದೇವೆ. ಇದು ನಮಗೆ ಅತ್ಯಂತ ವಿಶೇಷವಾದ ದೀಪಾ ಮೇರಾದ ಹಬ್ಬ.
–ಆರ್. ರಕ್ಷಿತಾ, ಪಿಯುಸಿ ವಿದ್ಯಾರ್ಥಿನಿ
ಹರಪನಹಳ್ಳಿ, ನ.21- ಬುಡಕಟ್ಟು ಸಂಸ್ಕೃತಿಯ ಲಂಬಾಣಿ ತಾಂಡಾಗಳಲ್ಲಿ ಬಂಜಾರ್ ಸಮುದಾಯದ ಮಹಿಳೆಯರು ವಿಶೇಷ ಉಡುಪುಗಳೊಂದಿಗೆ ದೀಪಾವಳಿಯನ್ನು ಅತ್ಯಂತ ವಿಭಿನ್ನವಾಗಿ ಆಚರಿಸುತ್ತಾರೆ. ಅವರು ಇದನ್ನು ದಿವಾಲಿ ಮತ್ತು ಲಂಬಾಣಿ ಯುವತಿಯರ ಹಬ್ಬವೆಂದೂ ಕರೆಯುತ್ತಾರೆ. ಈ ಹಬ್ಬವನ್ನು ಅವರು ಕಾಳಿಮಾಸ್ ಮತ್ತು ಬದಕಾರ್ ಎಂಬ ಹೆಸರಿನಿಂದ ಕರೆಯುತ್ತಾರೆ. ದೀಪಾವಳಿ ಹಬ್ಬದ ದಿನ ಮೃತಪಟ್ಟಿರುವ ವ್ಯಕ್ತಿಯ ಹೆಸರಿನಲ್ಲಿ ವಿಧಿ, ವಿಧಾನಗಳಿಂದ ವಿಶೇಷ ಪೂಜಾ ಕಾರ್ಯವನ್ನು ನೆರವೇರಿಸುತ್ತಾರೆ. ತಾಂಡಾಗಳಲ್ಲಿ ಪ್ರತಿಯೊಬ್ಬರೂ ಎಲ್ಲೇ ಇದ್ದರು ಬಂದು ಹುಟ್ಟಿದ ಊರು ಸೇರುತ್ತಾರೆ.
ಕಾಳಿಮಾಸ್ : ಬಂಜಾರ್ ತಾಂಡಾಗಳಲ್ಲಿ ಲಂಬಾಣಿಗರಿಗೆ ಹಬ್ಬ ಪ್ರಾರಂಭವಾಗುವುದೇ ದೀಪಾವಳಿಯ ಅಮಾವ್ಯಾಸೆಯ ದಿನ. ಈ ದಿನದಲ್ಲಿ ಅವರವರ ಮನೆಯ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ ವಿಶೇಷ ಪೂಜೆ, ಭಕ್ತಿಯಿಂದ ಆರಾಧಿಸುತ್ತಾರೆ. ಕಾಳಿಮಾಸ್ ದಿನ ಹಿರಿಯರ ಪದ್ಧತಿಯಂತೆ ತಾಂಡಾದ ಒಟ್ಟಿಗೆ ಒಂದು ಕುರಿಯನ್ನು ಬಲಿ ಕೊಟ್ಟು ತಾಂಡಾದ ಗಡಿಭಾಗದಲ್ಲಿ ಪೂಜೆ ಸಲ್ಲಿಸುತ್ತಾರೆ.
ಹೂವು ಕೀಳುವ ಸಂಭ್ರಮ : ಬಲಿ ಪಾಡ್ಯಮಿಯಂದು ಯುವತಿಯರು ಮತ್ತು ಅಪ್ರಾಪ್ತ ನಾರಿಯರು ಬಂಜಾರ್ ಸಂಪ್ರದಾಯದಂತೆ ರಂಗುರಂಗಿನ ಅಥವಾ ವರ್ಣರಂಜಿತ ಉಡುಪು ಧರಿಸಿ, ಅಲಂಕಾರ ಮಾಡಿಕೊಂಡು ಬಿದಿರಿನ ಬುಟ್ಟಿ ಹಿಡಿದುಕೊಂಡು ಹಳದಿ ಬಣ್ಣದ ವಲ್ಲಣ್ಯದ ಹೂವು ತರಲು ತಾಂಡಾದಿಂದ ಕಾಡಿಗೆ ಹೋಗುತ್ತಾರೆ. ಕಾಡಿನಲ್ಲಿ ಬುಟ್ಟಿ ತುಂಬಾ ಹೂವು ತುಂಬಿಕೊಂಡು ತಲೆಯ ಮೇಲೆ ಬುಟ್ಟಿ ಹೊತ್ತುಕೊಂಡು ಬಂಜಾರ್ ಹಾಡಿನೊಂದಿಗೆ ಕುಣಿದು ಕುಪ್ಪಳಿಸುತ್ತಾ ತಾಂಡಾಕ್ಕೆ ಮರಳಿ ಬರುತ್ತಾರೆ.
ಮೇರಾ ಸಂಭ್ರಮ : ಹಬ್ಬದ ಕೊನೆಯ ದಿನ ಅವಿವಾಹಿತ ನಾರಿಯರು ದೀಪಗಳನ್ನು ಹಿಡಿದುಕೊಂಡು ಗುಂಪು ಗುಂಪಾಗಿ ಸೇರಿಕೊಂಡು ದುಪಟ್ಟಿಯನ್ನು ಮೈಮೇಲೆ ಹಾಕಿಕೊಂಡು ದೀಪಾ ಆರದ ರೀತಿಯಲ್ಲಿ ಮನೆ ಮನೆಗೆ ತೆರಳಿ ಮೇರಾ ಅಂದರೆ ದೀಪಾ ಆಚರಣೆ ಮಾಡಿಕೊಂಡು ತಾಂಡಾದ ಹಟ್ಟಿ ನಾಯ್ಕ್ ಮತ್ತು ಡಾವೋ, ಕಾರಭಾರಿ ಮನೆಗಳಿಗೆ ತೆರಳಿ ಮೇರಾದಲ್ಲಿ ಕಾಣಿಕೆ ಪಡೆದುಕೊಂಡು, ನಂತರ ರಾತ್ರಿ ಇಡೀ ತಾಂಡಾದ ಪ್ರತಿಯೊಂದು ಮನೆಗಳಿಗೆ ತೆರಳಿ ಮನೆಯವರಿಂದ ಕಾಣಿಕೆ ಪಡೆದುಕೊಂಡು, ನಂತರ ತಾಂಡಾದ ಪ್ರತಿಯೊಂದು ಮನೆಗಳಿಗೆ ತೆರಳಿ ಹಳದಿ ಬಣ್ಣದ ಹೂವನ್ನು ಹಾಗೂ ಜಾನುವಾರುಗಳ ಹಸಿ ಗೊಬ್ಬರವನ್ನು ಉಂಡಿಮಾಡಿ ಮನೆಯ ಮುಂಭಾಗ ‘ವರಸೇದಾಡ್ ಕೋರ್ ದವಾಳಿ ಭಿಯಾ ತೋನಾ ಮೇರಾ, ವರ್ಸೇದಾಡ್ ಕೋರ್ ದವಾಳಿ ಬಾಪೂ ತೋನಾ ಮೇರಾ, ಯಾಡಿ ತೋನಾ ಮೇರಾ ಎಂಬ ಬಂಜಾರ್’ ಗೀತೆಯೊಂದಿಗೆ ಹಾಡನ್ನು ಹಾಡುತ್ತಾ ಮನೆಗೆ ತೆರಳುತ್ತಾರೆ.
ದೀಪಾವಳಿ ಹಬ್ಬ ಮುಗಿದ ನಂತರ ಹಿರಿಯರನ್ನು ಮನೆಯಲ್ಲೇ ಬಿಟ್ಟು ಕಾಫಿ ತೋಟದ ಕಡೆ ಮುಖ ಮಾಡುತ್ತಾರೆ. ತಮ್ಮ ಗಂಟು ಮೂಟೆ ಕಟ್ಟಿಕೊಂಡು ನಾಲ್ಕು ತಿಂಗಳ ಕಾಲ ಮರಳಿ ತಾಂಡಾಕ್ಕೆ ಬಾರದೆ, ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದವರು ಹಾಸ್ಟೆಲ್‍ಗೆ ಬಿಟ್ಟು ಹೋಗುತ್ತಾರೆ. ಮತ್ತೆ ಕೆಲವರು ಸಾಲ ಹೆಚ್ಚಾಗಿದೆ ಎಂದು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ, ಮಕ್ಕಳ ಸಮೇತ ಮನೆಯ ಬಾಗಿಲಿಗೆ ಬೀಗ ಜಡಿದು ಕುಟುಂಬ ಸಮೇತ ತಾಂಡಾದತ್ತ ಮುಖ ಮಾಡದೇ, ಕಾಫಿ ನಾಡಿನ ಕಡೆ ವಲಸೆ ಹೋಗುತ್ತಾರೆ.
ಈ ಬಾರಿ ಮಹಾಮಾರಿ ಕೊರೊನಾದ ಭೀತಿಯಿಂದ ತಾಂಡಾದ ಜನ ದುಡಿಮೆ ಇಲ್ಲದೇ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.