ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯ ಅಭಿಪ್ರಾಯ
ದಾವಣಗೆರೆ, ನ.19- ಇಲ್ಲಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತಾಲ್ಲೂಕಿನಲ್ಲಿ ರುದ್ರಭೂಮಿಗೆ ಜಾಗ ಸಿಗದ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತಲ್ಲದೇ, ಸಮಸ್ಯೆಗೆ ಪರಿಹಾರವಾಗಿ ವಿದ್ಯುತ್ ಚಿತಾಗಾರ ಮಾಡುವುದು ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ತಹಸೀಲ್ದಾರ್ ಕಚೇರಿ ಶಿರಸ್ತೇದಾರ್ ಜಗನ್ನಾಥ್ ಮಾತನಾಡಿ, ಉಪ ನೋಂದಣಾಧಿಕಾರಿ ಕಚೇರಿ ನಿಗದಿಪಡಿಸಿದ ದರಕ್ಕಿಂತ ಮೂರು ಪಟ್ಟು ಹಣ ನೀಡಲು ಅವಕಾಶವಿದ್ದರೂ ಕೆಲ ರೈತರು ಜಾಗ ನೀಡಲು ಮುಂದಾಗುತ್ತಿಲ್ಲ. ಇದರಿಂದ ತಾಲ್ಲೂಕಿನ 12 ಹಳ್ಳಿಗಳಲ್ಲಿ ರುದ್ರಭೂಮಿ ಸಮಸ್ಯೆ ಬಗೆಹರಿಯದಂತಾಗಿದೆ ಎಂದು ತಿಳಿಸಿದರು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಮಂಜುಳಾ ಅಣಬೇರು ಶಿವಮೂರ್ತಿ ಮಾತನಾಡಿ, ರುದ್ರಭೂಮಿಗೆ ಜಾಗದ ಸಮಸ್ಯೆ ಇದ್ದರೆ ವಿದ್ಯುತ್ ಚಿತಾಗಾರ ಮಾಡಬಹುದೆಂದು ಸಲಹೆ ನೀಡಿದರು. ಆಗ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಮಾತನಾಡುತ್ತಾ, ರುದ್ರಭೂಮಿಯ ಜಾಗದ ಸಮಸ್ಯೆಯಿಂದಾಗಿ ತಾಲ್ಲೂಕಿನ ಪುಟಗನಾಳ್ ಗ್ರಾಮಸ್ಥರು ರಸ್ತೆಗಳಲ್ಲಿ ಶವ ಸಂಸ್ಕಾರ ಮಾಡುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಚಿತಾಗಾರ ಮಾಡುವುದೇ ಸೂಕ್ತ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹ ಣಾಧಿಕಾರಿ ಬಿ.ಎಂ. ದಾರುಕೇಶ್ ಮಾತನಾಡಿ, ಮುಂದಿನ ಸಭೆಗೆ ವಿದ್ಯುತ್ ಚಿತಾಗಾರ ಘಟಕ ವೆಚ್ಚ, ಸೌಲಭ್ಯಗಳ ಕುರಿತಂತೆ ವರದಿ ನೀಡುವಂತೆ ಸೂಚಿಸಿದರು.
ಪ್ರಾದೇಶಿಕ ಅರಣ್ಯ ಇಲಾಖೆ ಉಪ ಅರಣ್ಯಾಧಿಕಾ ರಿ ಚಂದ್ರಶೇಖರ್ ಮಾತನಾಡುತ್ತಾ, ಗ್ಯಾಸ್ ಏಜೆನ್ಸಿಯವರ ಸಮಸ್ಯೆ ಕಾರಣದಿಂದ ತಾಲ್ಲೂಕಿನ 700 ಬಡ ಫಲಾನುಭವಿಗಳಿಗೆ ಕಳೆದ ವರ್ಷದ ಎಲ್ಪಿಜಿ ಸಿಲಿಂಡರ್ ವಿತರಣೆ ಆಗಿಲ್ಲ ಎಂದರು.
ಇದಕ್ಕೆ ಇಒ ದಾರುಕೇಶ್ ಮಾತನಾಡಿ, ದಾಖಲೆಗಳಿಲ್ಲದಿದ್ದರೂ ಸಿಲಿಂಡರ್ ವಿತರಣೆಗೆ ಸಭೆ ನಿಲುವಳಿ ಕೈಗೊಂಡಿದ್ದು, 3 ದಿನಗಳಲ್ಲಿ ಫಲಾನುಭವಿಗಳಿಗೆ ಸಿಲಿಂಡರ್ ವಿತರಣೆಗೆ ಕ್ರಮ ವಹಿಸುವಂತೆ ಸೂಚಿಸಿದರು.
ಅಧಿಕಾರಿ ನಾಗಭೂಷಣ್ ಮಾತನಾಡಿ, ತಾಲ್ಲೂಕಿನಲ್ಲಿ 4122 ಸರ್ವೇ ಪ್ರಕರಣಗಳಲ್ಲಿ 1386 ಇತ್ಯರ್ಥವಾಗಿವೆ. ಒಬ್ಬ ಸರ್ವೇಯರ್ ಮಾಸಿಕ 23 ಕಡತ ವಿಲೇ ಮಾಡಬೇಕಿದೆ. ಸಿಬ್ಬಂದಿ ಕೊರತೆ ನಡುವೆಯೂ ಜೂನ್- ಜುಲೈ ತಿಂಗಳ ಸರ್ವೇ ನಡೆಯುತ್ತಿದೆ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಎಲ್.ಡಿ. ವೆಂಕ ಟೇಶ ಮಾತನಾಡಿ, ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳು ಆರಂಭವಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಪಿಎಚ್ಸಿಯಲ್ಲಿ, ನಗರ ಪ್ರದೇಶಗಳಲ್ಲಿ ಬೇಡಿಕೆ ಬಂದ ಕಾಲೇಜುಗಳಲ್ಲೇ ನಮ್ಮ ತಂಡಗಳು ಪರೀಕ್ಷೆ ನಡೆಸುತ್ತಿವೆ. ತಾಯಿ ಮರಣ ಪ್ರಮಾಣ ತಗ್ಗಿಸಲು ಆರ್.ಜಿ. ಹಳ್ಳಿ, ಆಲೂರು ಗ್ರಾಮದ ಪಿಎಚ್ಸಿಗಳಲ್ಲಿ ನ.21ರಿಂದ ಡಿ.4ರವರೆಗೆ ಪುರುಷರ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರ ನಡೆಸಲಾಗುತ್ತಿದೆ. 1100 ರೂ.ಗಳ ಪ್ರೋತ್ಸಾಹ ಧನವಿದೆ ಎಂದರು.
ಹಾಸ್ಟೆಲ್ ವಿದ್ಯಾರ್ಥಿಗಳು ಕೋವಿಡ್ ನೆಗೆಟಿವ್ ವರದಿಯೊಂದಿಗೆ ಪಾಲಕರ ಒಪ್ಪಿಗೆ ಪತ್ರ ಪಡೆದು ವಿದ್ಯಾರ್ಥಿ ನಿಲಯಗಳಿಗೆ ಬರಬೇಕಿದೆ. ಪ್ರವೇಶಾತಿ ಪ್ರಮಾಣ ಕಡಿಮೆ ಇದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾದ ಮೀನಾ ಶ್ರೀನಿವಾಸ್ ಸೇರಿದಂತೆ ಇತರರಿದ್ದರು.