ದಾವಣಗೆರೆ, ನ.17- ಕೊರೊನಾ ಸಂಕಷ್ಟದಲ್ಲೂ ದೀಪಾವಳಿ ಹಬ್ಬವನ್ನು ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸೋಮವಾರ ಬಲಿಪಾಡ್ಯಮಿ ಆಚರಿಸಿದ ಜನತೆ, ಮನೆಗಳ ಮುಂದೆ ದೀಪ ಹಚ್ಚಿ, ಹಿರಿಯರ ಪೂಜೆ ನಡೆಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ, ಸಂಜೆಯಾಗುತ್ತಲೇ ಸಗಣಿಯಿಂದ ಹಟ್ಟಿಲಕ್ಕವ್ವನನ್ನು ತಯಾರಿಸಿಟ್ಟು, ಪೂಜಿಸಿದರು. ಜನರಲ್ಲಿ ಮಾಲಿನ್ಯದ ಬಗ್ಗೆ ಅರಿವು ಮೂಡುತ್ತಿರುವ ಪರಿಣಾಮ ಪಟಾಕಿ ಬಳಕೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಇದೆ.
ವ್ಯಾಪಾರ-ವಹಿವಾಟು ಗಮನಿಸಿದರೆ ಈ ವರ್ಷ ಕೊರೊನಾ ಸಂಕಷ್ಟವೂ ಪಟಾಕಿ ಅಬ್ಬರಕ್ಕೆ ಕಡಿವಾಣ ಹಾಕಿದಂತೆ ಕಂಡು ಬಂತಾದರೂ, ಸೋಮವಾರ ರಾತ್ರಿಯ ಪಟಾಕಿ ಸದ್ದು ಗಮನಿಸಿ ಹೇಳುವುದಾದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ ಶೇ.25ರಷ್ಟು ಮಾತ್ರ ಪಟಾಕಿ ಬಳಕೆ ಕಡಿಮೆ ಎನ್ನಬಹುದು.
ನ್ಯಾಯಾಲಯವು ಹಸಿರು ಪಟಾಕಿ ಮಾತ್ರ ಬಳಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಡಳಿತ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿತ್ತು. ಅದಕ್ಕಾಗಿ ಕೆಲ ಮಾನದಂಡಗಳನ್ನೂ ನಿಗಧಿ ಮಾಡಿತ್ತು. ಆದರೆ ಜನತೆ ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ.
ಕೆಲವರು ಹಸಿರು ಪಟಾಕಿಯನ್ನೇ ಕೇಳಿ ಪಡೆದರಾದರೂ, ಮೇಲಿನ ಲೇಬಲ್ ಹೊರತುಪಡಿಸಿದರೆ ಅವೂ ಸಹ ಮಾಮೂಲಿ ಪಟಾಕಿಯಂತೆಯೇ ಇದ್ದವು. ಇದು ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ಎಂದು ಕೊಂಡವರು ಹೇಳುತ್ತಿದ್ದುದು ಕಂಡು ಬಂತು.
ಪಟಾಕಿ ವ್ಯಾಪಾರದಲ್ಲಿ ಕುಸಿತ: ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸಲಾಗಿದ್ದ ಪಟಾಕಿ ಮಳಿಗೆಗಳಲ್ಲಿ ಈ ಬಾರಿ ಅಂದಾಜು ಕೇವಲ 50 ಲಕ್ಷ ರೂ. ವಹಿವಾಟು ನಡೆದಿದೆ ಎಂದು ಪಟಾಕಿ ಬಳಕೆದಾರರ ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷ ಡಿ.ಎಸ್. ಸಿದ್ದಣ್ಣ ಪತ್ರಿಕೆಗೆ ತಿಳಿಸಿದರು.
ಕೊರೊನಾ ಸಂಕಷ್ಟ ಒಂದೆಡೆಯಾದರೆ, ಸರ್ಕಾರದ ತೆಗೆದುಕೊಂಡ ದಿಢೀರ್ ನಿರ್ಧಾರಗಳು ಹಾಗೂ ಹಸಿರು ಪಟಾಕಿಯೇ ಡೇಂಜರ್ ಎಂದು ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳು ಪಟಾಕಿ ವ್ಯವಹಾರ ಕುಸಿತಕ್ಕೆ ಕಾರಣವಾಯಿತು ಎಂದವರು ಅಭಿಪ್ರಾಯಿಸಿದರು.