ನಗರದಲ್ಲಿ ನಿಷೇಧಿತ ಪಟಾಕಿಗಳ ವಶ

ದಾವಣಗೆರೆ, ನ.14- ಈ ವರ್ಷದ ಬೆಳಕಿನ ಹಬ್ಬ ದೀಪಾವಳಿಗೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರ ಹಸಿರು ಪಟಾಕಿಗೆ ಸಮ್ಮತಿ ಸೂಚಿಸಿತ್ತಾದರೂ ಹಸಿರು ಪಟಾಕಿ ಜೊತೆಗೆ ನಿಷೇಧಿತ ಪಟಾಕಿಯನ್ನೂ ಸಹ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರದ ಲ್ಲಿ ಇಂದು ದಾಳಿ ಕಾರ್ಯಾಚರಣೆ ನಡೆಸಲಾಯಿತು.

ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ಸುಮಾರು 42 ಪಟಾಕಿ ಮಳಿಗೆಗಳಲ್ಲಿ ಪಟಾಕಿ ವ್ಯಾಪಾರ-ವಹಿವಾಟು ಬೆಳಿಗ್ಗೆಯಿಂದ ನಡೆಯುತ್ತಿತ್ತು. 

ಸಂಜೆ ವೇಳೆಗೆ ನಗರ ಪಾಲಿಕೆಯ ಆರೋಗ್ಯ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪೊಲೀಸ್ ಇಲಾಖೆ ಸೇರಿ ನಿಷೇಧಿತ ಪಟಾಕಿ ಮಾರಾಟವಾಗುತ್ತಿದ್ದ ಮಳಿಗೆ ಗಳ ಮೇಲೆ ಜಂಟಿ‌‌ ದಾಳಿ ಕಾರ್ಯಾಚರಣೆ ನಡೆಸಿ ಹಸಿರು ಪಟಾಕಿ ಹೊರತುಪಡಿಸಿ ನಿಷೇಧಿತ ಪಟಾಕಿಗಳ ಬಾಕ್ಸ್ ಗಳನ್ನು ವಶಪಡಿಸಿಕೊಳ್ಳಲಾಯಿತು.

ಸುಮಾರು 30 ಅಧಿಕ ಅಂಗಡಿಗಳ ಮೇಲೆ ಪರಿಸರ ಮಾಲಿನ್ಯ ಅಧಿಕಾರಿ ಸುನೀಲ್ ನೇತೃತ್ವದಲ್ಲಿ ಹಾಗೂ ಡಿವೈಎಸ್ಪಿ ನಾಗೇಶ್ ಐತಾಳ್ ಮತ್ತು ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ಸಹಭಾಗಿತ್ವದಲ್ಲಿ ದಾಳಿ ಮಾಡಲಾಯಿತು. 

ಈ ವೇಳೆ ಹಸಿರು ಪಟಾಕಿಯಲ್ಲದೆ, ನಿಷೇಧಿತ ಪಟಾಕಿ ಸಹ ಇರುವುದು ಕಂಡು ಬಂದಾಗ ಕೆಲ ಕಾಲ ಕೆಲ ಅಂಗಡಿಗನ್ನು ಬಂದ್ ಮಾಡಿಸಿ ನಿಷೇಧಿತ ಪಟಾಕಿಗಳನ್ನು ಬಾಕ್ಸ್ ಗಳಲ್ಲಿ ಹಾಕಿ ನಗರ ಪಾಲಿಕೆಯ ಕಸ ತುಂಬುವ 4 ವಾಹನಗಳಲ್ಲಿ ತುಂಬಿ ಸಾಗಿಸಲಾಯಿತು. ಈ ವೇಳೆ ಅಂಗಡಿ ಮಾಲೀಕರು ಅಧಿಕಾರಿಗ ಳೊಂದಿಗೆ ವಾಗ್ವಾದಕ್ಕೆ ಇಳಿದ ವೇಳೆ ಪೊಲೀಸರು ಅವರನ್ನು ನಿಯಂತ್ರಣ ಮಾಡಿದರು.

ಸರ್ಕಾರ ಹಾಗೂ ಹೈಕೋರ್ಟ್ ಆದೇಶದಂತೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಆದೇಶ ಮಾಡಿದ್ದರು. ನಿಷೇಧಿತ ಪಟಾಕಿ ಮಾರಾಟವಾಗು ತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಿರುವುದಾಗಿ ಮನವರಿಕೆ ಮಾಡಿದರು. 

ಸರ್ಕಾರವು 2-3 ತಿಂಗಳ ಮುಂಚೆಯೇ ಪಟಾಕಿ ನಿಷೇಧಿಸಬೇಕಿತ್ತು. ಅಲ್ಲದೇ ಪಟಾಕಿ ವಿಚಾರವಾಗಿ ನಮಗೆ ಸೂಚಿಸಿದ್ದರೆ ನಾವು ಪಟಾಕಿಗಳ ತರಿಸುತ್ತಿರಲಿಲ್ಲ. ಇದೀಗ ನಷ್ಟ ಅನುಭವಿಸಬೇಕೆಂಬುದು ಪಟಾಕಿ ಮಾಲೀಕರ ಅಳಲಾಗಿದೆ.

ಪಟಾಕಿ ಮಾರಾಟದ ಸ್ಥಳಕ್ಕಾಗಮಿಸಿದ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಪರಿಶೀಲಿಸಿ, ನಂತರ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಹಸಿರು ಪಟಾಕಿಗೆ ಮಾತ್ರ ಅವಕಾಶವಿರುವುದಾಗಿ ಸರ್ಕಾರದ ಸುತ್ತೋಲೆ ಇದ್ದು, ಅದರ ಜವಾಬ್ದಾರಿಯನ್ನು ನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆಗೆ ವಹಿಸಿದೆ. ಹಾಗಾಗಿ ಪರಿಶೀಲನೆ ನಡೆಸಿ, ನಿಷೇಧಿತ ಪಟಾಕಿಗಳನ್ನು ವಶಪಡಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು.

ದಾಳಿ ನಡುವೆಯೂ ವ್ಯಾಪಾರ ಜೋರು: ಇತ್ತ ದಾಳಿ ನಡೆಯುತ್ತದ್ದರೆ ಹಬ್ಬದ ಸಂಭ್ರಮದಲ್ಲಿರುವ ಜನರು ತಮ್ಮ ಮಕ್ಕಳ ಸಹಿತ ಪಟಾಕಿ ಅಂಗಡಿಗಳಿಗೆ  ಮುಗಿಬಿದ್ದು ಪಟಾಕಿ ಖರೀದಿಯಲ್ಲಿ ನಿರತರಾಗಿದ್ದು, ಪಟಾಕಿ ಖರೀದಿಸಿ ಸಾಗಿದ್ದು ಕಂಡು ಬಂತು.

error: Content is protected !!