ದಾವಣಗೆರೆ, ನ.13- ಅಶ್ವಯುಜ ಕೃಷ್ಣ ತ್ರಯೋದಶಿ ಅಂದರೆ ಧನ ತ್ರಯೋದಶಿ, ಧನ್ವಂತರಿ ಜಯಂತಿಯನ್ನು ಭಾರತೀಯರು ಅನಾದಿ ಕಾಲದಿಂದಲೂ ಆಚರಿಸುತ್ತಾ ಬಂದಿರುತ್ತಾರೆ. ಆರೋಗ್ಯದಾತನಾದ ಧನ್ವಂತರಿ ದೇವರನ್ನು ಸ್ಮರಿಸಿ ಶ್ರದ್ಧಾಭಕ್ತಿಯಿಂದ ಪೂಜಿಸುವುದೇ ಧನ್ವಂತರಿ ಜಯಂತಿಯ ವಿಶೇಷತೆ ಆಗಿದೆ ಎಂದು ನಗರದ ಆದರ್ಶಯೋಗ ಪ್ರತಿಷ್ಠಾನದ ಯೋಗ ಗುರು ಡಾ|| ರಾಘವೇಂದ್ರ ಗುರೂಜಿ ಅಭಿಪ್ರಾಯಪಟ್ಟರು.
ನಗರದ ಆದರ್ಶ ಯೋಗ ಪ್ರತಿಷ್ಠಾನದ ಶ್ರೀ ಮಹಾಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಇಂದು ಏರ್ಪಡಿಸಿದ್ದ ಧನ್ವಂತರಿ ಜಯಂತಿಯ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧನ್ವಂತರಿ ಎಲ್ಲಾ ವೈದ್ಯರ ಪಾಲಿಗೆ ದೇವರು. ಮಹಾ ವಿಷ್ಣುವಿನ 24 ಅವತಾರಗಳಲ್ಲಿ 12ನೇ ಅವತಾರವೇ ಧನ್ವಂತರಿ ದೇವರು ಶ್ರೀ ಸೂಕ್ತದಲ್ಲಿ ಭೂಮಿ, ಜಲ, ವಾಯು, ಅಗ್ನಿ, ಸೂರ್ಯ ಇವುಗಳನ್ನು `ಧನ’ವೆಂದೇ ಕರೆಯಲಾಗಿದೆ. ಯಾವ ಧನಕ್ಕೆ ನಿಜವಾದ ಅರ್ಥವಿದೆಯೋ ಅದುವೇ ನಿಜವಾದ ಲಕ್ಷ್ಮಿ.
ಆದ್ದರಿಂದ ಈ ದಿನ ಯಾರು ಧನ್ವಂತರಿಯನ್ನು ಆರಾಧಿಸುತ್ತಾರೋ ಅವರಿಗೆ ಸಕಲ ಐಶ್ವರ್ಯ, ಆರೋಗ್ಯವು ಸಮೃದ್ಧಿಯಾಗಿ ಲಭಿಸುತ್ತದೆ ಎಂದು ಗುರೂಜಿಯವರು ಧನ್ವಂತರಿ ಜಯಂತಿಯ ಮಹತ್ವವನ್ನು ವಿವರಿಸಿದರು. ಭಾರತೀಯರು ನಮಸ್ಕಾರ ಮಾಡುವ ಪದ್ಧತಿಯಲ್ಲಿರುವ ವೈಜ್ಞಾನಿಕ ಆರೋಗ್ಯ ಸಂಪತ್ತನ್ನು ಉದಾಹರಣೆ ಮೂಲಕ ತಿಳಿಸಿಕೊಟ್ಟರು.
ಧನ್ವಂತರಿ ಪೂಜಾ ವಿಧಿ ವಿಧಾನಗಳನ್ನು ವಿಧಿವತ್ತಾಗಿ ನೆರವೇರಿಸಿದ ಶ್ರೀ ಹನುಮಂತ ಶಾಸ್ತ್ರಿಗಳು ಮಾತನಾಡಿ, ಧನ್ವಂತರಿ ದೇವರ ಆರಾಧನೆಯಿಂದ ಆರೋಗ್ಯ, ನೆಮ್ಮದಿ, ಧನ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.
ಚಿನ್ನ-ಬೆಳ್ಳಿ ವರ್ತಕ ಮುರಳಿಧರ ಆಚಾರ್ಯ ಮಾತನಾಡಿದರು. ಎಸ್.ಬಿ.ಐ. ವಿಮಾ ಕಂಪನಿಯ ಗಿರೀಶ್, ಜಿಲ್ಲಾ ಪಂಚಾಯತ್ ಪಿಡಿಓ ಶ್ರೀಮತಿ ಸುರೇಖಾ ದಂಪತಿ ಶ್ರೀ ಧನ್ವಂತರಿ ಪೂಜಾ ಕೈಂಕರ್ಯವನ್ನು, ಹನುಮಂತ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಿಸಿದರು.
ಪ್ರತಿಷ್ಠಾನದ ಹೆಚ್. ಮಂಜುನಾಥ್ ಹೂವಿನ ಅಲಂಕಾರ ಸೇವೆ, ಶ್ರೀಮತಿ ಮಂಗಳಗೌರಿ ರಂಗೋಲಿ ಸೇವೆ, ಶ್ರೀಮತಿ ಜ್ಯೋತಿ ಲಕ್ಷ್ಮಿ ವಾಸುದೇವ್ ಪ್ರಸಾದ ಸೇವೆಯನ್ನು ಅರ್ಪಿಸಿದರು. ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎ.ಆರ್. ಶೇಷಾದ್ರಿ, ಅಂಚೆ ಇಲಾಖೆಯ ವೇದಾವತಿ ಮತ್ತು ಸುನಿತಾ ರವೀಂದ್ರ, ಚಿ.ಲಿಖಿತ್, ಅಣ್ಣೇಶ್, ಶಿಕ್ಷಕಿ ರತ್ನಮ್ಮ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.