ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾಮತಿ ತಹಶೀಲ್ದಾರ್ ತನುಜಾ ಟಿ.ಸವದತ್ತಿ
ನ್ಯಾಮತಿ, ಆ.1- ಪ್ರಜಾಪ್ರಭುತ್ವದ ಯಶಸ್ಸಿಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಬಹು ಮುಖ್ಯವಾದವು. ಆಡಳಿತ ವ್ಯವಸ್ಥೆಗಳು ಸಮಾಜಮುಖಿಯಾಗಬೇಕಾದರೆ ಪತ್ರಿಕಾ ರಂಗದ ಕೊಡುಗೆ ಅಗತ್ಯವಾಗಿದೆ ಎಂದು ನ್ಯಾಮತಿ ತಹಶೀಲ್ದಾರ್ ತನುಜಾ ಟಿ.ಸವದತ್ತಿ ಹೇಳಿದರು.
ನ್ಯಾಮತಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಪತ್ರಕರ್ತರ ಸಂಘ, ಹೊನ್ನಾಳಿ – ನ್ಯಾಮತಿ ಘಟಕದ ವತಿಯಿಂದ ಮೊನ್ನೆ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಇತಿಹಾಸದಲ್ಲಿ ಇಡೀ ಆಡಳಿತ ವ್ಯವಸ್ಥೆ ಸರಿಯಾದ ದಾರಿಯಲ್ಲಿ ಸಾಗುವಂತೆ ಪತ್ರಿಕಾ ರಂಗ ನೋಡಿಕೊಂಡು ಬರುತ್ತಿದೆ. ಪ್ರಸ್ತುತ ಕೊರೊನಾ ವೈರಸ್ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾ ವಾರಿಯರ್ಸ್ಗಳಾಗಿ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಆಡಳಿತ ವ್ಯವಸ್ಥೆಯೊಂದಿಗೆ ಕೈ ಜೋಡಿಸಿ ಸಮಾಜ ಸೇವೆಗೆ ಧುಮುಕಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಹನುಮಂತಪ್ಪ ಎಂ. ಶಿರಿಹಳ್ಳಿ ಮಾತನಾಡಿ, ಪತ್ರಿಕಾ ರಂಗ ಹುಟ್ಟಿ ಅದು ಬೆಳೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿ ಪತ್ರಕರ್ತರು ತಮ್ಮ ಸಾಮಾಜಿಕ ಜವಾಬ್ದಾರಿ ಅರಿತು ಕೆಲಸ ಮಾಡಿದಲ್ಲಿ ಅವರ ಕಾರ್ಯ ಇಡೀ ಸಮಾಜಕ್ಕೆ ಅದರ್ಶಪ್ರಾಯ ವಾಗಿರುತ್ತದೆ ಎಂದು ಹೇಳಿದರು. ನ್ಯಾಮತಿ ಸರಕಾರಿ ಆಸ್ಪತ್ರೆಯ ವೈದ್ಯ ಡಾ. ರೇಣುಕಾನಂದ, ಉಪ ತಹಶೀಲ್ದಾರ್ ಎನ್.ನಾಗರಾಜ್ ಭಾಗವಹಿಸಿದ್ದರು.
ಆಯುಷ್ ಇಲಾಖೆ ವೈದ್ಯ ಡಾ. ಸಾಲಿಮಠ ಅವರು ಕೊರೊನಾ ವೈರಸ್ ವಿರುದ್ಧ ರೋಗ ನಿರೋಧಕ ಔಷಧ ಕಿಟ್ಗಳನ್ನು ಪತ್ರಕರ್ತರಿಗೆ ವಿತರಿಸಿ ಅವುಗಳ ಬಳಕೆ ಮತ್ತು ಉಪಯೋಗದ ಬಗ್ಗೆ ವಿವರಿಸಿದರು. ವೈದ್ಯ ಡಾ.ಲಿಂಗರಾಜೇಂದ್ರ ಆರ್ಯುವೇದ ಔಷಧ ಪದ್ಧತಿಗಳ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಸಂಘದ ಜಿಲ್ಲಾಧ್ಯಕ್ಷ ಎಂ.ಪಿ.ಎಂ. ಷಣ್ಮುಖಯ್ಯ, ಪ್ರಧಾನ ಕಾರ್ಯದರ್ಶಿ ಡಿ.ಎಂ. ಹಾಲಾರಾಧ್ಯ ಮಾತನಾಡಿದರು.
ಎಂ.ಎಸ್.ಶಾಸ್ತ್ರಿ ಹೊಳೆಮಠ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪದಾಧಿಕಾರಿಗಳ ಆಯ್ಕೆ: ಸಂಘದ ನೂತನ ಅಧ್ಯಕ್ಷರಾಗಿ ರಾಂಪುರದ ಎ.ಕೆ.ಹಾಲೇಶ್, ಉಪಾಧ್ಯಕ್ಷ ರಾಜು , ಪ್ರಧಾನ ಕಾರ್ಯದರ್ಶಿ ಡಿ.ಎಂ.ಹಾಲಾರಾಧ್ಯ, ಸಹ ಕಾರ್ಯದರ್ಶಿ ಶಕೀಲ್ ಆಹಮ್ಮದ್, ಖಜಾಂಚಿ ಎಸ್.ಸುರೇಶ್, ಸಂಘಟನಾ ಕಾರ್ಯದರ್ಶಿ ರಮೇಶ್ ಮಡಿವಾಳ, ಜಿಲ್ಲಾ ಸಂಚಾಲಕರಾಗಿ ಗಿರೀಶ್ ನಾಡಿಗ್, ಸಲಹಾ ಸಮಿತಿ ಸದಸ್ಯರಾಗಿ ಎಂ.ಎಸ್.ಶಾಸ್ತ್ರಿ ಹೊಳೆಮಠ, ಎಂ.ಪಿ.ಎಂ. ವಿಜಯಾನಂದ ಕುಮಾರ ಸ್ವಾಮಿ, ಮಾಸಡಿ ಅರುಣಗೌಡ ಆಯ್ಕೆಯಾದರು.