ಮತ್ತೊಬ್ಬರ ಹೆಸರಲ್ಲಿ ಪಹಣಿ: ರೈತ ಕುಟುಂಬದ ಧರಣಿ

ನೇಣಿಗೆ ಶರಣಾಗುವುದಾಗಿ ಹಗ್ಗವನ್ನು ಹಿಡಿದು ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ

ಹರಿಹರ, ನ 3- ತಾಲ್ಲೂಕಿನ ಹಾಲಿವಾಣ ಗ್ರಾಮದ ರೈತ ಕುಟುಂಬದ ಬಸವನಗೌಡ, ಹನುಮನಗೌಡ, ರಂಗನಗೌಡ, ವೀರಪ್ಪಗೌಡ, ನರಸಿಂಹಪ್ಪ ಅವರಿಗೆ ಸೇರಿದ ಜಮೀನನ್ನು ಗ್ರಾಮದ ಇನ್ನೊಬ್ಬರ ಹೆಸರಿಗೆ ಅಧಿಕಾರಿಗಳು ಖಾತೆ ಮಾಡಿ ಅವರ ಹೆಸರು ಪಹಣಿಯಲ್ಲಿ ಬರುವಂತೆ ಮಾಡಿರುವುದರಿಂದ ನಮ್ಮ ಕುಟುಂಬದ ಸುಮಾರು 30 ಕ್ಕೂ ಹೆಚ್ಚು ಜನರು ಬೀದಿ ಪಾಲಾಗಿದ್ದಾರೆ ಎಂದು ದೂರಿ ನೇಣಿಗೆ ಶರಣಾಗುವುದಾಗಿ ಹಗ್ಗವನ್ನು ಹಿಡಿದು ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.

ಈ ವೇಳೆ ಮಾತನಾಡಿದ ಬಸವನಗೌಡ್ರು ಹಾಲಿವಾಣ, ಮೂಲ ವಾರಸುದಾರರಾದ ರುದ್ರಪ್ಪ ಬಿನ್ ರಂಗಪ್ಪ, ಸಿದ್ದಪ್ಪ ಬಿನ್ ಹನುಮಂತಪ್ಪ ಇವರಿಗೆ ಸೇರಿದ್ದ 4/1 ನೇ ಸರ್ವೆ ನಂ. ಜಮೀನನ್ನು ಕಳೆದ 70 ವರ್ಷಗಳಿಂದ 7 ಎಕರೆ ಭೂಮಿಯನ್ನು ಉಳುಮೆ ಮಾಡಿಕೊಂಡು ನಾವು ಬರುತ್ತಿದ್ದೇವೆ. 22-9-2020 ರಂದು ಸಹ ನಮ್ಮ ಅಜ್ಜನವರ ಹೆಸರಿಗೆ ಪಹಣಿ ಬಂದಿದ್ದು, ಇದಾದ ನಂತರ ಹಾಲಿವಾಣ ಗ್ರಾಮದ ಹನುಮಂತಪ್ಪ ಬಿನ್ ಹನುಮಪ್ಪ ಎಂಬುವವರ ಹೆಸರಿಗೆ ತಹಶೀಲ್ದಾರ ಕಚೇರಿಯ ಅಧಿಕಾರಿಗಳು ನೀಡಿರುವ ಪಹಣಿಯಲ್ಲಿ ಬರುತ್ತಿದೆ.

 ಆ ವ್ಯಕ್ತಿಗಳು 2018 ರಲ್ಲಿ ಮರಣವನ್ನು ಹೊಂದಿದ್ದಾರೆ. ಮತ್ತು 1 ಎಕರೆ ಜಮೀನನ್ನು ಮತ್ತು 2 ಎಕರೆ ಜಮೀನನ್ನು ಒಂದೇ ಹೆಸರಿಗೆ ನೋಂದಣಿ ಮಾಡಿಸಲಾಗಿದೆ. ಅವರ ಹೆಸರಿಗೆ ವಂಶವೃಕ್ಷ ಸೇರಿದಂತೆ ಯಾವುದೇ ಸ್ಪಷ್ಟವಾದ ದಾಖಲೆಗಳು ಇಲ್ಲದಿದ್ದರೂ ಸಹ ಅವರ ಹೆಸರಿಗೆ ಪಹಣಿ ನೀಡಿದ್ದಾರೆ. ಇದರಿಂದ ನಮ್ಮ ಕುಟುಂಬದ 30ಕ್ಕೂ ಅಧಿಕ ಸದಸ್ಯರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ಮಾತನಾಡಿ,  ತಮ್ಮ ಇಲಾಖೆಯಿಂದ ಯಾವುದೇ ಆ ರೀತಿಯ ತಪ್ಪುಗಳು ನಡೆಯಲು ಅವಕಾಶ ಇರುವುದಿಲ್ಲ. ಮೇಲಿನ ಆಧಿಕಾರಿ ಗಳಿಂದ ಏನು ಆದೇಶ ಬಂದಿರುತ್ತದೆಯೋ ಅದರ ಅಡಿಯಲ್ಲಿ ಕೆಲಸವನ್ನು ನಿರ್ವಹಣೆ ಮಾಡಲಾಗಿರುತ್ತದೆ. ಅನ್ಯಾಯವಾಗಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಹನುಮನಗೌಡ, ರಂಗನಗೌಡ, ವೀರನಗೌಡ, ನರಸಿಂಹಪ್ಪ, ಕರಿಯಪ್ಪ, ಹನುಮಂತಪ್ಪ, ಹನುಮಗೌಡ ಇನ್ನಿತರರು ಪಾಲ್ಗೊಂಡಿದ್ದರು.

error: Content is protected !!