ಕೂಡ್ಲಿಗಿ ಪ.ಪಂ.ಚುಕ್ಕಾಣಿ ಬಿಜೆಪಿಗೆ

ಕೂಡ್ಲಿಗಿ, ನ. 2- ಇಲ್ಲಿನ ಪಟ್ಟಣ ಪಂಚಾಯ್ತಿ ಅಧ್ಯಕ್ಷೆಯಾಗಿ 2ನೇ ವಾರ್ಡಿನ ಸದಸ್ಯರಾದ ಎಂ. ಶಾರದಾ ಬಾಯಿ ಹಾಗೂ ಉಪಾಧ್ಯಕ್ಷರಾಗಿ 15ನೇ ವಾರ್ಡಿನ ಸದಸ್ಯರಾದ ಊರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೂಡ್ಲಿಗಿ ಪಟ್ಟಣ ಪಂಚಾಯ್ತಿಯ 20 ಸದಸ್ಯರಲ್ಲಿ ಇಬ್ಬರು ಸದಸ್ಯರು ಕೋವಿಡ್‌ಗೆ ಬಲಿಯಾಗಿದ್ದರಿಂದ 18 ಸದಸ್ಯರ ಬಲಾಬಲ ಇತ್ತು. ಇವರಲ್ಲಿ 6 ಬಿಜೆಪಿ ಬೆಂಬಲಿತ ಸದಸ್ಯರು, 6 ಕಾಂಗ್ರೆಸ್ ಬೆಂಬಲಿತ ಸದಸ್ಯರು, 4 ಜೆಡಿಎಸ್ ಬೆಂಬಲಿತ ಸದಸ್ಯರು, 2 ಪಕ್ಷೇತರ ಸದಸ್ಯರಿದ್ದಾರೆ. 4 ಜೆಡಿಎಸ್ ಹಾಗೂ 2 ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ಸೂಚಿಸಿದ್ದರಿಂದ ಕಾಂಗ್ರೆಸ್ ಪಕ್ಷ ಯಾವುದೇ ಸ್ಪರ್ಧೆ ಮಾಡುವ ಗೋಜಿಗೆ ಹೋಗಲಿಲ್ಲ. ಮೇಲಾಗಿ ಬಿಜೆಪಿ ಸದಸ್ಯರಿಗೆ ವಿಪ್ ಜಾರಿಗೊಳಿಸಲಾಗಿತ್ತು. ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದರಿಂದ ಕಾಂಗ್ರೆಸ್‌ನಲ್ಲಿ ಎಸ್ಸಿ ಮಹಿಳೆ ಸದಸ್ಯರಿರಲಿಲ್ಲ. ಬಿಜೆಪಿ ಸದಸ್ಯೆ ಎಂ. ಶಾರದಾಬಾಯಿ ಬಿಟ್ಟರೆ ಪಕ್ಷೇತರ ಸದಸ್ಯೆಯೊಬ್ಬರು ಎಸ್ಸಿ ಮಹಿಳೆ ಇದ್ದರು. ಆದರೆ ಆ ಸದಸ್ಯೆ ಬಿಜೆಪಿಗೆ ಬೆಂಬಲ ಸೂಚಿಸಿದ್ದರಿಂದ ಕಾಂಗ್ರೆಸ್‌ಗೆ ಯಾವುದೇ ಅವಕಾಶಗಳು ಸಿಗಲಿಲ್ಲ. ಹೀಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಎರಡೂ ಅವಿರೋಧ ಆಯ್ಕೆಯಾಗಿ ಶಾಸಕರ ನಿರೀಕ್ಷೆಯಂತೆಯೇ ಆಯಿತು.

ಅಧ್ಯಕ್ಷ ಸ್ಥಾನಕ್ಕೆ ಶಾರದಾಬಾಯಿ, ಉಪಾಧ್ಯಕ್ಷ ಸ್ಥಾನಕ್ಕೆ ಊರಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ ಚುನಾವಣಾಧಿಕಾರಿ, ಪ.ಪಂ. ಮುಖ್ಯಾಧಿಕಾರಿ ಫಕೃದ್ದೀನ್ ಸಹಾಯಕರಾಗಿದ್ದರು. ಗುಡೇಕೋಟೆ, ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ಬಿಜೆಪಿಯಲ್ಲಿ ಸಂತಸ : ಬಿಜೆಪಿ ಕೂಡ್ಲಿಗಿ ಪಟ್ಟಣ ಪಂಚಾಯ್ತಿಯ ಆಡಳಿತ ಚುಕ್ಕಾಣಿಯನ್ನು ಹಿಡಿಯುತ್ತಿದ್ದಂತೆಯೇ ಪಟ್ಟಣ ಪಂಚಾಯ್ತಿ ಕಾರ್ಯಾಲಯದ ಆವರಣಕ್ಕೆ ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ, ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಪಿ. ಚನ್ನಬಸವನಗೌಡ, ಕೂಡ್ಲಿಗಿ ತಾ.ಪಂ. ಅಧ್ಯಕ್ಷರಾದ ಕೆ. ನಾಗರತ್ನಮ್ಮ ಲಿಂಗಪ್ಪ, ಕೂಡ್ಲಿಗಿ ತಾ.ಪಂ. ಅಧ್ಯಕ್ಷ ಪಿ. ಚನ್ನಪ್ಪ, ಜಿ.ಪಂ. ಸದಸ್ಯ ಹುರುಳಿಹಾಳ್ ರೇವಣ್ಣ, ಬಿಜೆಪಿ ಮುಖಂಡರಾದ ಬಿ. ಭೀಮೇಶ್, ಡಿ.ಹೆಚ್. ದುರುಗೇಶ್, ಕೆ.ಎಂ. ತಿಪ್ಪೇಸ್ವಾಮಿ, ಕೆ.ಹೆಚ್. ವೀರನಗೌಡ, ಕೆ.ಬಿ. ಮಂಜುನಾಥ, ರಾಮದುರ್ಗ ಪಾಪಣ್ಣ, ಟಿ.ಜಿ. ಮಲ್ಲಿಕಾರ್ಜುನಗೌಡ, ಮಂಜುನಾಥ ನಾಯಕ, ತ್ರಿಮೂರ್ತಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಗುಪ್ಪಾಲ ಕಾರಪ್ಪ ಮತ್ತಿತರರು ಆಗಮಿಸಿ ಸಂತಸ ವ್ಯಕ್ತಪಡಿಸಿದರು.

error: Content is protected !!