ಕಾಂಗ್ರೆಸ್ ನಿಂದ ಕಿಸಾನ್ ಅಧಿಕಾರ ದಿವಸ್: ಬಿಜೆಪಿ ವಿರುದ್ಧ ಪ್ರತಿಭಟನೆ

ದಾವಣಗೆರೆ, ಅ.31- ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮ ದಿನಾಚರಣೆ ಅಂಗವಾಗಿ ನಗರದ ಜಯದೇವ ವೃತ್ತದಲ್ಲಿಂದು ಕಿಸಾನ್ ಅಧಿಕಾರ ದಿವಸ್ ಆಚರಿಸಲಾಯಿತು. ಅಲ್ಲದೇ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. 

ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿ, ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಶ್ರೀಮಂತರು, ಉದ್ಯಮಿಗಳ ಪರವಾಗಿ ಬಿಜೆಪಿ ಸರ್ಕಾರ ನಿಂತಿದೆ. ಖಾಸಗೀಕರಣ, ಆಧುನೀ ಕರಣ ಹೆಸರಲ್ಲಿ ದೇಶವನ್ನೇ ಮಾರಾಟಕ್ಕೆ ಯತ್ನಿಸಲಾಗುತ್ತಿದೆ. ಕೋವಿಡ್ ಹೆಸರಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಪಾರದರ್ಶಕ ಆಡಳಿತವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಭೂ ಸುಧಾರಣೆ, ವಿದ್ಯುತ್ ಬಿಲ್, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಜಾರಿಗೆ ತರುವ ಮೂಲಕ ರೈತರ ಮರಣ ಶಾಸನ ಬರೆದಿದ್ದಾರೆ. ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರ ಜಮೀನನ್ನು ಖಾಸಗಿಯವರಿಗೆ ನೀಡಿ  ಕೃಷಿಯನ್ನೇ ನಿರ್ಮೂಲನಕ್ಕೆ ಮುಂದಾಗಿದೆ ಎಂದು ದೂರಿದರು.

ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತೆ ಮಾಡುವ ಕಾಯ್ದೆ ತರಬೇಕು. ಈ ಕೂಡಲೇ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ. ಶಿವಗಂಗಾ ಮಾತನಾಡಿ, ದೇಶದಲ್ಲೇ ಜನ ವಿರೋಧಿ ಹಾಗೂ ರೈತ ವಿರೋಧಿ ಆಡಳಿತ ಮಾಡಲಾಗುತ್ತಿದೆ. ಭಾರತ ದೇಶದ ರಾಜಕೀಯ ಇತಿಹಾಸದಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ದುರಾಡಳಿತ ಮಾಡುತ್ತಿದೆ ಎಂದು ಆಪಾದಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ,  ಎಪಿಎಂಸಿ ಮಾಜಿ ಅಧ್ಯಕ್ಷ ಮುದೇ ಗೌಡ್ರು ಗಿರೀಶ್, ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಸದಸ್ಯರಾದ ದೇವರಮನಿ ಶಿವಕುಮಾರ್, ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಪಾಮೇನಹಳ್ಳಿ ನಾಗರಾಜ್, ಆಶಾ ಉಮೇಶ್, ಸುಧಾ ಇಟ್ಟಿಗುಡಿ, ಸವಿತಾ ಗಣೇಶ್ ಹುಲ್ಮನಿ, ಶ್ವೇತಾ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಕೆಪಿಸಿಸಿ ಸದಸ್ಯ ಅಣಜಿ ಅಂಜಿನಪ್ಪ, ಸಾಮಾಜಿಕ ಜಾಲತಾಣದ ಗೋವಿಂದ್ ಹಾಲೇಕಲ್ಲು, ಮಹಿಳಾ ಕಾಂಗ್ರೆಸ್‍ನ ಶುಭಮಂಗಳ, ರಾಜೇಶ್ವರಿ, ಉಮಾಕುಮಾರ್, ಕವಿತಾ, ಆವರಗೆರೆಯ ಲಕ್ಷ್ಮೀ ಬಾಯಿ ಅಣ್ಣಪ್ಪ, ಸರ್ವಮಂಗಳಮ್ಮ, ರಾಧಾಬಾಯಿ, ಗೀತಾ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!