ಹರಪನಹಳ್ಳಿ : ಎಸ್ಟಿಗೆ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಉಪವಿಭಾಗಾಧಿಕಾರಿಗೆ ಮನವಿ

ಹರಪನಹಳ್ಳಿ, ಅ.31- ಪರಿಶಿಷ್ಟ ಪಂಗಡದವರಿಗೆ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಪ್ರಮಾಣ ಶೇ.3 ರಿಂದ ಶೇ.7.5 ಕ್ಕೆ ಹೆಚ್ಚಳ ಹಾಗೂ ನ್ಯಾ.ನಾಗಮೋಹನ್‍ದಾಸ್ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ಆದೇಶ ಹೊರಡಿಸುವಂತೆ ಒತ್ತಾಯಿಸಿ, ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಉಪವಿಭಾಗಾಧಿಕಾರಿ ಯವರಿಗೆ ಮನವಿ ಸಲ್ಲಿಸಲಾಯಿತು. 

ಈ ವೇಳೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ,   ನಿವೃತ್ತ ನ್ಯಾ. ಹೆಚ್‌.ಎನ್. ನಾಗಮೋಹನ್‍ದಾಸ್‌ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವು   ಪರಿಶಿಷ್ಟ ಜಾತಿಗೆ ಶೇ.15 ರಿಂದ ಶೇ.17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ. 3 ರಿಂದ ಶೇ. 7.5 ರಷ್ಟು ಮೀಸಲಾತಿ ಹೆಚ್ಚಿಸುವಂತೆ ಸಮಗ್ರ ವರದಿ ಸಲ್ಲಿಸಿದರೂ ಕೂಡ ಸರ್ಕಾರ ಮೀನಾಮೇಷ ಮಾಡುತ್ತಿರುವುದು ಸರಿಯಲ್ಲ ಎಂದರು.

ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಗೌರವ ಅಧ್ಯಕ್ಷೆ ಟಿ. ಪದ್ಮಾವತಿ ಮಾತನಾಡಿ,    ಈಗಾಗಲೇ ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡದವರಿಗೆ ಶೇ.7.5 ಮೀಸಲಾತಿ ನೀಡಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿಯನ್ನು ನೀಡಬೇಕಿದ್ದು, ನ್ಯಾ. ನಾಗಮೋಹನ್‍ದಾಸ್ ವರದಿ ಪ್ರಕಾರ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಮುಕ್ತ ಅಧಿಕಾರವಿದ್ದು, ಮುಖ್ಯಮಂತ್ರಿಗಳು ಸಚಿವ ಸಂಪುಟದ ಸಭೆ ನಡೆಸಿ ಮೀಸಲಾತಿ ಅನುಷ್ಠಾನಗೊಳಿಸಬೇಕೆಂದರು.

ಮಡಿವಾಳ ಸಮಾಜದ ಜಿಲ್ಲಾ ಅಧ್ಯಕ್ಷ ಎಂ. ಉಮಾಪತಿ, ವಾಲ್ಮೀಕಿ ನಾಯಕ ಸಮಾಜದ ಮಹಿಳಾ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ಶಿವಾನಂದ, ಕಾರ್ಯದರ್ಶಿ ತೆಲಗಿ ಜಿ. ನಾಗರಾಜ್, ಏಕಲವ್ಯ ಸಂಘರ್ಷ ಸಮಿತಿ ಅಧ್ಯಕ್ಷ ಆರ್. ಪ್ರಕಾಶ್, ತಾಲ್ಲೂಕು ಪಂಚಾಯತಿ ಸದಸ್ಯ ವೈ. ಬಸಪ್ಪ, ಜಿಲ್ಲಾ ಎಸ್ಟಿ ಮೋರ್ಚಾ ಕಾರ್ಯದರ್ಶಿ ಆರ್.ಲೊಕೇಶ್,  ತಾಲ್ಲೂಕು ಬಿ ಜೆ ಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಟಿ. ಮನೋಜ್, ಮುಖಂಡರಾದ ಮಂಡಕ್ಕಿ ಸುರೇಶ್, ಪಿ.ಅರುಣ್‍ಕುಮಾರ್, ಮಹಿಳಾ ಸಂಘಟನೆಯ ಹೆಚ್.ಎ. ಶಾಲಿನಿ, ಮಂಜುಳಾ, ಹನುಮಕ್ಕ, ಪವಿತ್ರ, ಯೋಗೀಶ್, ನಂದಿಬೇವೂರು ರಾಜಪ್ಪ, ಸದಸ್ಯ ಬಿ. ಅಂಜಿನಪ್ಪ, ಶಿವರಾಜು, ಸಾಸ್ವಿಹಳ್ಳಿ ನಾಗರಾಜ್, ಹರಿಯಮ್ಮನಹಳ್ಳಿ ಮಂಜುನಾಥ್ ಸೇರಿದಂತೆ ಇತರರಿದ್ದರು.

error: Content is protected !!